ತುಮಕೂರು ಜನರೇ ಎಚ್ಚರ | ನಿಧಿಗಾಗಿ ನಡೆಯಿತೇ ಮಹಿಳೆಯ ಕೊಲೆ…? | ವಿಶ್ವ ಕನ್ನಡಿ

ತುಮಕೂರು:  ಬೆಟ್ಟದ ಮೇಲಿನ ದೇವಾಲಯವೊಂದರ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ನಿಧಿಗಾಗಿ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ತಾಲ್ಲೂಕಿನ ಜಕ್ಕೇನಹಳ್ಳಿ ಬಳಿಯ ಎಂ. ಗೊಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಬೆಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯದ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಈ ದೇವಾಲಯದ ಒಳಭಾಗದಲ್ಲಿರುವ ಆಂಜನೇಯ ವಿಗ್ರಹದ ಮುಂಭಾಗದಲ್ಲಿ ನಿಧಿಗಾಗಿ ಅಗೆದು ಪೂಜೆ ಸಲ್ಲಿಸಿರುವ ದೃಶ್ಯ ಕಂಡು ಬಂದಿವೆ, ಈ ಘಟನೆ 15 ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೆ ಈ ಮಹಿಳೆಯ ಸಾವಿನ ರಹಸ್ಯ ಬಹಿರಂಗಗೊಳ್ಳಬೇಕಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಶವ ಪರೀಕ್ಷೆಯ ನಂತರ ತಿಳಿಯಲಿದೆ.

ನಿಧಿಗಾಗಿ ನಡೆಯಿತೇ ಮಹಿಳೆ ಕೊಲೆ..?

ಎಂ. ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಆಗಿಂದಾಗ್ಗೆ ನಿಧಿಗಾಗಿ ಕಿಡಿಗೇಡಿಗಳು ಅಗೆದು ದೇವಾಲಯ ಆವರಣವನ್ನು ಹಾಳು ಮಾಡುತ್ತಿದ್ದರು ಎನ್ನಲಾಗಿದೆ.  ದೇವಾಲಯದ ಬೆಟ್ಟದ ಮೇಲಿರುವ ಕಾರಣ ಗ್ರಾಮಸ್ಥರು ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಹುಣ್ಣಿಮೆ, ಅಮಾವಾಸ್ಯೆಗಳಂದು ಈ ದೇವಾಲಯದಲ್ಲಿ ಪೂಜೆ ನಡೆಯುತ್ತಿತ್ತೆಂದು ಹೇಳಲಾಗಿದೆ.  ಈ ದೇವಾಲಯದಲ್ಲಿ ಕಿಡಿಗೇಡಿಗಳು ನಿಧಿ ಆಸೆಯಿಂದ ಅಗೆದು ಮಹಿಳೆಯನ್ನು ಬಲಿ ಕೊಟ್ಟಿರಬಹುದು ಎಂಬ ಶಂಕೆಯನ್ನು ಕೆಲ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದರೆ ಇದು ಸತ್ಯವೋ ಅಥವಾ ಕೇವಲ ಊಹಾಪೋಹವೋ ಎಂಬುದನ್ನು ಪೊಲೀಸರ ತನಿಖೆಯಿಂದಷ್ಟೆ ಖಚಿತಪಡಿಸಿಕೊಳ್ಳಬೇಕಿದೆ. ಘಟನೆಯ ಸುದ್ದಿ ತಿಳಿದ ಕೂಡಲೇ ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.