ತುಮಕೂರು: ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗಿದ್ದ ಬಡವರು ಮತ್ತು ದಲಿತರ ಮಕ್ಕಳ ಕಲಿಕೆಗೆ ಪೂರಕವಾಗಿದ್ದ ವಿದ್ಯಾಗಮ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಹಾಮಾರಿ ಕೋರೋನದಿಂದಾಗಿ ಶಾಲಾ, ಕಾಲೇಜುಗಳ ಆರಂಭವಾಗದ ಹಿನ್ನೆಲೆಯಲ್ಲಿ ಸರಕಾರ ಅನ್‍ಲೈನ್ ಶಿಕ್ಷಣದಿಂದ ವಂಚಿತರಾದ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಶಿಕ್ಷಣ ಇಲಾಖೆ ವಿದ್ಯಾಗಮ ಎಂಬ ಯೋಜನೆಯನ್ನು ಜಾರಿಗೆ ತಂದು, ಶಿಕ್ಷಕರು ಶಾಲೆಯ ಹೊರಗೆ,ದೇವಾಲಯ, ಸಮುದಾಯಭವನ, ಮರದ ನೆರಳನಲ್ಲಿ ಆಸಕ್ತ ಮಕ್ಕಳಿಗೆ ಕಲಿಸುವಂತಹ ಯೋಜನೆಯನ್ನು ಜಾರಿಗೆ ತಂದು ಬಹಳಷ್ಟು ಅನುಕೂಲ ಮಾಡಿತ್ತು.ಇದರಿಂದ ದೊಡ್ಡ ದೊಡ್ಡ ಕಾನ್ವೆಂಟ್‍ಗಳ ಅನ್‍ಲೈನ್ ಶಿಕ್ಷಣದಿಂದ ವಂಚಿತರಾದ ಬಡವರು, ದಲಿತರು,ಹಿಂದುಳಿದ ವರ್ಗಗಳ ಮಕ್ಕಳು ಇದರ ಲಾಭ ಪಡೆಯುತ್ತಿದ್ದರು.ಆದರೆ ಕೆಲವರು ವಿದ್ಯಾಗಮದಿಂದ ಶಿಕ್ಷಕರಿಗೆ ಕಂಟಕ ಎಂಬಂತೆ ಕೆಲವರು ಬಿಂಬಿಸಿದ್ದರ ಪರಿಣಾಮ,ಇದನ್ನು ಸರಿಯಾಗಿ ಪರಾಮರ್ಶಿಸದೆ ಮಾಧ್ಯಮಗಳು ದ್ವನಿಗೂಡಿಸಿದ್ದರ ಪರಿಣಾಮ ಸರಕಾರ ವಿಧಿಯಿಲ್ಲದೆ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.ಇದರ ನೇರ ಪರಿಣಾಮ ಬಡವರ ಮಕ್ಕಳ ಮೇಲಾಗುತ್ತಿದೆ ಎಂದು ಸಂಘಟನೆಗಳು ಆಪಾದಿಸಿವೆ. ವಿದ್ಯಾಗಮ ಆರಂಭವಾದ ಮಕ್ಕಳನ್ನು ಶಾಲೆಗೆ ಕಳುಹಿಸಿ,ನಿಶ್ಚಿಂತೆಯಿಂದ ಕೂಲಿ,ನಾಲಿಗೆ ಹೋಗುವುದು,ದನಕರುಗಳ ಪೋಷಣೆಯಲ್ಲಿ ತೊಡಗಿದ್ದ ಪೋಷಕರಿಗೆ,ವಿದ್ಯಾಗಮದ ತಾತ್ಕಾಲಿಕ ಸ್ಥಗಿತದಿಂದ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಕೊಳ್ಳುವ ಜವಾಬ್ದಾರಿ ಪೋಷಕರ ಮೇಲೆ ಬಿದ್ದಿದೆ.ಕೆಲ ಶಿಕ್ಷಕರು ಸಂಘಟನೆಗಳ ಹೆಸರಿನಲ್ಲಿ ಸರಕಾರಗಳ ಮೇಲೆ ಒತ್ತಡ ತಂದು ಸದರಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೆಲಸ ಮಾಡದೆಯೇ ವೇತನ ಪಡೆಯುತ್ತಿದ್ದಾರೆ.ಜನರಿಗೆ ತೆರಿಗೆ ಹಣದಲ್ಲಿ ಇವರಿಗೆ ಪುಕ್ಕಟ್ಟೆ ವೇತನ ನೀಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾಗಮದಿಂದ ಶಿಕ್ಷಕರಿಗೆ ಕೋರೋನ ಹರಡುತ್ತದೆ ಎಂದು ಹೇಳುವ ಶಿಕ್ಷಕ ಸಮುದಾಯ ಮತ್ತು ಇದಕ್ಕೆ ದ್ವನಿಗೂಡಿಸಿದ ಮಾಧ್ಯಮಗಳ ಕಣ್ಣಿಗೆ,ಇದೇ ಶಿಕ್ಷಕರು ಶಿಕ್ಷಕರು ಮತ್ತು ಪದವಿಧರರ ಕ್ಷೇತ್ರಗಳ ಚುನಾವಣೆಯಲ್ಲಿ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್-19 ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರಚಾರದಲ್ಲಿ ತೊಡಗಿರುವುದು ಕಾಣುತ್ತಿಲ್ಲವೇ,ಇದರ ಬಗ್ಗೆ ಏಕೆ ಸರಕಾರ ಮತ್ತು ಮಾಧ್ಯಮಗಳು ಮೌನವಹಿಸಿವೆ ಎಂದು ಪ್ರಶ್ನಿಸಿದ್ದಾರೆ. ವಿದ್ಯಾಗಮ ಯೋಜನೆಯ ಸಲುವಾಗಿ ಮಕ್ಕಳು ಗೆಳೆಯರ ಜೊತೆಗೆ ಶಾಲೆಗೆ ಹೋಗಿ ಕಲಿಯುತ್ತಿದ್ದರು. ಯೋಜನೆಯ ತಾತ್ಕಾಲಿಕ ರದ್ದಿನಿಂದ ಕೆರೆ ಕುಂಟೆಗಳಿಗೆ ಹೋಗಿ ಈಜುವುದು,ಅವರಿವರ ಹೊಲೆಗಳ ಬೆಳೆದಿರುವ ಶೇಂಗಾ, ಜೋಳ ಕಿತ್ತು ಜಗಳ ತಂದಿಡುವ ಪ್ರಕರಣ ಹೆಚ್ಚುತ್ತಿವೆ. ಶಾಲೆಯಿಲ್ಲದ ಕಾರಣ ಮೈಲನಹಳ್ಳಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಅಶೋಕ್ ಹಾಲೆನೂರು ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ನಡೆದಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗಲಿವೆ.ಆದ್ದರಿಂದ ಸರಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ವಿದ್ಯಾಗಮ ಯೋಜನೆಯನ್ನು ಪುನರಾರಂಭಿಸುವಂತೆ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ, ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಸದಸ್ಯರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಪತ್ರ ಸಲ್ಲಿಸುವ ವೇಳೆ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ಕೆ.ನಿಧಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್.ಗಿರೀಶ್,ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್.ಜಿ.ಆರ್.,ಜಿಲ್ಲಾ ಉಪಾಧ್ಯಕ್ಷ ಸಿದ್ದಲಿಂಗಯ್ಯ, ರಾಜು ಅಳಲಾಸಂದ್ರ, ಶಿವರಾಜು, ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಗೋವಿಂದರಾಜು ಸೇರಿದಂತೆ ಹಲವರು ಜೊತೆಗಿದ್ದರು