ಜಿ.ಪಂ. ಅಧ್ಯಕ್ಷರ ವಿರುದ್ದದ ಅವಿಶ್ವಾಸ ನಿಲುವಳಿ ಸಭೆ ರದ್ದು

ತುಮಕೂರು: ಹಾಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ದ ಪಕ್ಷಾತೀತವಾಗಿ ಜಿ.ಪಂ.ಸದಸ್ಯರು ತಂದಿದ್ದ ಅವಿಶ್ವಾಸ ನಿರ್ಣಯ ಗೊತ್ತುವಳಿಯೇ ನಕಲಿ ಎಂದು ಹೈಕೋರ್ಟು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 15 ರಂದು ನಡೆಯುಬೇಕಾಗಿದ್ದ ಅವಿಶ್ವಾಸ ಗೊತ್ತುವಳಿ ಸಭೆ ರದ್ದಾಗಿದೆ.

ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ 57 ಸದಸ್ಯರಿದ್ದು, ಕಾಂಗ್ರೆಸ್‍ನ 23, ಜೆಡಿಎಸ್‍ನ 14, ಬಿಜೆಪಿಯ 19 ಹಾಗೂ ಒರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನ ಬಿ.ಸಿ.ಎಂ(ಎ)ಗೆ ನಿಗಧಿಯಾಗಿದ್ದು, ಬಿಜೆಪಿ-ಜೆಡಿಎಸ್ ಒಂದಾಗಿ ಲತಾ ರವಿಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ, ಶಾರದ ನರಸಿಂಹಮೂರ್ತಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಅಧ್ಯಕ್ಷರ ಪದಚ್ಯುತಿಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮೂವರು ಸೇರಿ 49 ಜನರು ಸಹಿ ಹಾಕಿ ವಿಭಾಗೀಯ ಕಾರ್ಯದರ್ಶಿಯವರಿಗೆ ಅವಿಶ್ವಾಸಗೊತ್ತುವಳಿ ಮಂಡನೆಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಅಕ್ಟೋಬರ್ 15 ರಂದು ಅವಿಶ್ವಾಸಗೊತ್ತುವಳಿ ಸಭೆಯನ್ನು ನಿಗಧಿ ಪಡಿಸಿದ್ದರು.

 ಈ ನಡುವೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಲತಾ ರವಿಕುಮಾರ್ ಅವರ ಪತಿ ಕಲ್ಕರೆ ರವಿಕುಮಾರ್ ಅವರು ತುಮಕೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ದ ಸಲ್ಲಿಸಿರುವ ಅವಿಶ್ವಾಸ ನಿಲುವಳಿಗೆ ಮಾಡಿರುವ ಸಹಿ ನಕಲಿಯಾಗಿದ್ದು,ಮಹಿಳಾ ಸದಸ್ಯರ ಪರವಾಗಿ ಅವರ ಪತಿಯವರೇ ಸಹಿ ಮಾಡಿದ್ದಾರೆ.ಆದ್ದರಿಂದ ಸದರಿ ಅವಿಶ್ವಾಸ ನಿಲುವಳಿ ಮನವಿ ಪತ್ರವನ್ನು ತಿರಸ್ಕರಿಸುವಂತೆ ಹೈಕೋರ್ಟಿನ ಮೆಟ್ಟಿಲೆರಿದ್ದರು.ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ದೂರುದಾರರು ತಿಳಿಸಿರುವಂತೆ ಜಿ.ಪಂ.ಮಹಿಳಾ ಸದಸ್ಯರ ಪರವಾಗಿ ಅವರ ಪತಿಯವರು ಸಹಿ ಮಾಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವಿಶ್ವಾಸ ನಿಲುವಳಿ ಸಭೆಯನ್ನು ರದ್ದುಗೊಳಿಸಿದೆ.

ಬಿಜೆಪಿಗೆ ತೀವ್ರ ಮುಖಭಂಗ:ಹಾಲಿ ಜಿ.ಪಂ.ಅಧ್ಯಕ್ಷರನ್ನು ಕೆಳಗೆ ಇಳಿಸಿ,ಆ ಜಾಗಕ್ಕೆ ಗೊಲ್ಲ ಸಮುದಾಯದ ಮಹಿಳೆಯನ್ನು ಕೂರಿಸಿ ಶಿರಾ ಉಪಚುನಾವಣೆಯಲ್ಲಿ ಗೊಲ್ಲಮತಗಳನ್ನು ಪಡೆಯಲು ಹವಣಿಸಿದ್ದ ಬಿಜೆಪಿಗೆ ಹೈಕೋರ್ಟಿನ ತೀರ್ಪು ತೀವ್ರ ಮುಖಭಂಗವನ್ನು ಉಂಟು ಮಾಡಿದೆ.ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೋಗಿ ಮುಖಭಂಗಕ್ಕೆ ಒಳಗಾಗಿರುವ ಬಿಜೆಪಿ ಜಿಲ್ಲಾಧ್ಯಕ್ಷರು, ಶಿರಾ ಉಪ ಚುನಾವಣೆಯಲ್ಲಿ ಗೊಲ್ಲ ಸಮುದಾಯದ ಮತಗಳನ್ನು ಪಡೆಯಲು ಯಾವ ತಂತ್ರ ಹೂಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.