ಮಾಧ್ಯಮ ಕಣ್ಗಾವಲು ಕೋಶಕ್ಕೆ ಚುನಾವಣಾ ವೀಕ್ಷಕರ ಭೇಟಿ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರ ಚುನಾವಣೆಯ ಸಂಬಂಧ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಿರುವ ಮಾಧ್ಯಮ ಕಣ್ಗಾವಲು ಕೋಶಕ್ಕೆ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಾಮಾನ್ಯ ಚುನಾವಣಾ ವೀಕ್ಷಕರಾದ(ಜನರಲ್ ಅಬ್ಸರ್ವರ್) ಬಿ. ಮಹೇಶ್ವರಿ ಅವರು ಭೇಟಿ ನೀಡಿ ಪರಿಶೀಲಿಸಿದರು.  ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ: ಕೆ. ರಾಕೇಶ್ ಕುಮಾರ್ ಅವರು ಸಹ ಮಾಧ್ಯಮ ಕಣ್ಗಾವಲು ಕೋಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಧ್ಯಮ ಕಣ್ಗಾವಲು ಕೋಶವು ಶಿರಾ ವಿಧಾನಸಭಾ ಚುನಾವಣೆಯ ಉಪಚುನಾವಣೆಯ ಕುರಿತಂತೆ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಿತ್ತರವಾಗುವ ಸುದ್ಧಿಗಳು, ಜಾಹೀರಾತುಗಳು, ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ಮಾಹಿತಿಯ ಬಗ್ಗೆ ದಿನದ 24 ಗಂಟೆ ನಿಗಾವಹಿಸಲಿದೆ. ಸಾಮಾನ್ಯ ಚುನಾವಣಾ ವೀಕ್ಷಕರು, ಮಾಧ್ಯಮ ಕಣ್ಗಾವಲು ಕೋಶದಲ್ಲಿ ನಿರ್ವಹಿಸುತ್ತಿರುವ ಕಾರ್ಯಗಳ ಬಗ್ಗೆ  ಮಾಹಿತಿ ಪಡೆದರು ಹಾಗೂ ಕಣ್ಗಾವಲು ಕೋಶವು ನಿರ್ವಹಿಸಬೇಕಾಗಿರುವ ಕಾರ್ಯಗಳ ಕುರಿತಂತೆ ಕೆಲವು ನಿರ್ದೇಶನಗಳನ್ನು ನೀಡಿದರು. 

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅಜಯ್, ಎಂಸಿಎಂಸಿಯ ಸದಸ್ಯ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ., ಮಾಧ್ಯಮ ಕಣ್ಗಾವಲು ಕೋಶದ ನೋಡೆಲ್ ಅಧಿಕಾರಿ ಶ್ರೀನಿವಾಸ್, ಶಬ್ಬಿರ್ ಅಹಮದ್, ತಹಶೀಲ್ದಾರ್ ಮೋಹನ್ ಕುಮಾರ್, ಮತ್ತಿತರರು ಹಾಜರಿದ್ದರು.