ಅರ್ಧ ಟೀ ಮತ್ತು ಎರಡು ಬಿಸ್ಕೆಟ್ ಗೆ ದಲಿತರ ಕುಂದುಕೊರತೆ ಸಭೆ: ದಲಿತ ಮುಖಂಡರ ಆಕ್ರೋಶ

ಗುಬ್ಬಿ: ದಲಿತರ ಕುಂದುಕೊರತೆ ಸಭೆಯನ್ನು ವ್ಯವಸ್ಥಿತವಾಗಿ ಆಯೋಜಿಸದೇ ದಲಿತರ ಸಮಸ್ಯೆ ಬಗೆಹರಿಸದೇ ಕಾಟಾಚಾರಕ್ಕೆ ಸಭೆ ನಡೆಸಿ ಅರ್ಧ ಟೀ ಮತ್ತು ಎರಡು ಬಿಸ್ಕೆಟ್ ಗೆ ನಮ್ಮನ್ನು ಸೀಮಿತಗೊಳಿಸಿ ಸಭೆಯನ್ನು ಮುಕ್ತಾಯಗೊಳಿಸಲು ಮುಂದಾಗಿದ್ದೀರಾ ಎಂದು ದಲಿತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ರವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ  ದಲಿತ ಮುಖಂಡರು ನಮ್ಮ ಸಮಸ್ಯೆಗಳನ್ನು ತಿಳಿಸಲು, ಕೂರಲು ಆಸನಗಲಿಲ್ಲ,ಕುಡಿಯಲು ನೀರಿನ ವ್ಯವಸ್ಥೆ ಇಲ್ಲ,ಮಾತನಾಡಲು ಮೈಕ್ ಇಲ್ಲ, ಕೆಲವರಿಗೆ ಮಾತ್ರ ಕೂರಲು ವ್ಯವಸ್ಥೆ ಮಾಡಲಾಗಿದೆ, ಇನ್ನು ಕೆಲವು ಮಂದಿ ಸಭೆ  ಮುಕ್ತಾಯದ ವರೆಗೂ ನಿಲ್ಲುವಂತಾಗಿದೆ ಮೈಕ್ ಇಲ್ಲದೆ ನಮ್ಮ ಸಮಸ್ಯೆಗಳು ಅಧಿಕಾರಿಗಳಿಗೆ ಕೇಳುತ್ತಿಲ್ಲ ಅಧಿಕಾರಿಗಳು ತಿಳಿಸುವ ಉತ್ತರಗಳು ಹಿಂಬದಿಯಲ್ಲಿ ಕುಳಿತವರಿಗೆ ಕೇಳಿಸುತ್ತಿಲ್ಲ ಎಂದು ಸಭೆಯ ಉದ್ದಗಲಕ್ಕೂ ಗೊಂದಲ ಸೃಷ್ಟಿಯಾಗಿ ಗದ್ದಲ ಗಲಾಟೆಗಳು ನಡೆದು ಬರೀ ಕೂಗಾಟದ ಪ್ರಸಂಗಗಳೇ ನಡೆದವು.

ಸಮಸ್ಯೆಗಳ ಸರಮಾಲೆಗಳನ್ನೇ ಉಣ ಬಡಿಸಿದ ದಲಿತರು: ತಾಲೂಕಿನ ಹಲವು ಗ್ರಾಮಗಳಿಗೆ  ಇಲ್ಲಿಯವರೆಗೂ ದಲಿತರಿಗೆ ಸ್ಮಶಾನ ಭೂಮಿಯ ಬಾಗ್ಯ ದೊರೆತಿಲ್ಲ ಕೆಲವು ಬಾಗದ ಪಹಣಿಗಳಲ್ಲಿ ಸ್ಮಶಾನ ಎಂದು ಬಂದರೂ ಕೂಡ ಆ ಜಾಗ ಎಲ್ಲಿದೆ ಎಂಬುದೇ ತಿಳಿಯುತ್ತಿಲ್ಲ ದಲಿತರ ಯಾವುದೇ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಕೆಲವು ಕಾರಣಗಳಿಗೆ ಅರ್ಜಿ ಸಲ್ಲಿಸಿದರೆ ಸುಮಾರು ವರ್ಷಗಳೇ ಸವೆಸಬೇಕಿದೆ ಕೇವಲ ಒಂದಷ್ಟು ಸಮಸ್ಯೆಗೆ ಸೂಕ್ತ ಪರಿಹಾರ ನೀಡದ ಮೇಲೆ ನಾಮಕವಸ್ಥೆಗಷ್ಟೇ ಸಭೆ ಕರೆದರೆ ಪ್ರಯೋಜನವಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಸಬಾ ನಡವಳಿಯಲ್ಲಿ ಕೇವಲ ಹಳೆಯ ಸಮಸ್ಯೆಗಳಿದ್ದು ನಾವು ನೀಡಿದ ಹಲವಾರು ಪ್ರಶ್ನೆಗಳು ಮಾಯವಾಗಿದೆ ಎಂದು ದಲಿತ ಮುಖಂಡ ನಾಗರಾಜು ತಿಳಿಸಿದಾಗ ಅಧಿಕಾರಿಯೊಬ್ಬರು ಸುಮ್ಮನೆ ಕೂರಿ ನಾನು ಕೂಡ 1979 ರಲ್ಲಿಯೇ ದಲಿತ ಸಂಘಟನೆಯಲ್ಲಿ ಹೋರಾಟ ಮಾಡಿಕೊಂಡು ಬಂದವನು ನನಗೆ ಹೇಳಬೇಡಿ ಎಂದಾಗ ಸಭೆಯಲ್ಲಿದ್ದ ಎಲ್ಲಾ ದಲಿತ ಮುಖಂಡರು ಅಧಿಕಾರಿಗಳ ಮೇಲೆ ಆಕ್ರೋಶ ಭರಿತರಾಗಿ ಏರು ಧ್ವನಿಯಲ್ಲಿ ನೀವು ಹೋರಾಟದ ಹಾದಿಯಲ್ಲಿ ಬಂದಿದ್ದೀರಾ ಎಂದರೆ ಏನು ಅರ್ಥ? ಆಗಾದರೆ ನಮ್ಮ ಸಮಸ್ಯೆಗಳನ್ನು ನಿಮಗೆ ತಿಳಿಸಬಾರದೆ  ನಮಗೆ ಬೇಕಾದ ಮಾಹಿತಿಗಳನ್ನು ನಿಮ್ಮಿಂದ ಪಡೆಯಬಾರದೇ ಎಂದು ಕೂಗಾಡಿದರು ಕೆಲವು ನಿಮಿಷ ಉದ್ವಿಗ್ನ ಪರಿಸ್ಥಿತಿ  ಏರ್ಪಟ್ಟು  ನಂತರ ಕೆಲವರು ಪರಿಸ್ಥಿತಿಯನ್ನು ತಿಳಿಗೊಳಿಸಿ ಸಮಾಧಾನ ಪಡಿಸಿ ಸಭೆಯನ್ನು ಶಾಂತಗೊಳಿಸಿದರು. ತಾಲೂಕು ಸಂಚಾಲಕ ಜಿ.ಸಿ.ನರಸಿಂಹಮೂರ್ತಿ ಮಾತನಾಡಿ ತಾಲೂಕಿನಲ್ಲಿ ಅದೆಷ್ಟೋ ದಲಿತರ ಸಮಸ್ಯೆಗಳು ಇಲ್ಲಿಯವರೆಗೆ ನೆನೆಗುದಿಗೆ ಬಿದ್ದು ಯಾವ ಸಮಸ್ಯೆಗಳು ಬಗೆಹರಿದಿಲ್ಲ ಕೇವಲ ನಾಮಕವಸ್ಥೆಗಷ್ಟೇ ಇಂತಹ ಸಭೆಗಳನ್ನು ಆಯೋಜಿಸಿ ಕೇವಲ ಸಮಸ್ಯೆಗಳನ್ನು ಮಾತ್ರ ಕೇಳುವುದು ಬಿಟ್ಟರೆ ಪರಿಹರಿಸುವ ಗೋಜಿಗೆ ಯಾರು ಹೋಗದೆ ಕೇವಲ ಬರೀ ದಲಿತರ ಕಣ್ಣೊರೆಸುವ ನಾಟಕವಾಡಿ ಸುಮ್ಮನಾಗುತ್ತಿದ್ದಾರೆ ಇಂತಹ ಕಾಟಾಚಾರದ ಸಭೆಗಳನ್ನು ಮಾಡದೇ ಸಮಸ್ಯೆಗೆ ಸೂಕ್ತ ಪರಿಹಾರ ಕೊಡುವ ನಿಟ್ಟಿನಲ್ಲಿ ಮುಂದಿನ ಸಭೆಗಳು ನಡೆಯಬೇಕು ಎಂದರು. ಮಾರನಹಳ್ಳಿ ಶಿವಣ್ಣ ಮಾತನಾಡಿ ಸರ್ಕಾರದಿಂದ ಸಂಬಳ ಪಡೆವ ಅಧಿಕಾರಿಗಳಾದ ನೀವುಗಳು ಸುಮ್ಮನೆ ಕಾಲಹರಣ ಮಾಡದೇ ನೀವು ಪಡೆಯುವ ಸರ್ಕಾರದ ಸಂಬಳಕ್ಕಾದರು ಒಂದಿಷ್ಟು ಕೆಲಸ ಮಾಡಿ ಅದೆಷ್ಟೋ ಕುಟುಂಬಗಳು ನಿತ್ಯ ತಮ್ಮ ಸಮಸ್ಯೆಗಳನ್ನು ಹೊತ್ತು ತಮ್ಮಲ್ಲಿ ಬರಬೇಕಾದರೆ ದೂರದ ಊರುಗಳಿಂದ ಹಣವಿಲ್ಲದೇ ಪರದಾಡಿಕೊಂಡು ಬರುತ್ತಾರೆ ಅಂಥವರ ಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸಬೇಕಿದೆ ಅದನ್ನು ಬಿಟ್ಟು ಕೇವಲ ಅರ್ಧ ಟೀ ಎರಡು ಬಿಸ್ಕೆಟ್ ಬಿಟ್ಟರೆ ಈ ಸಭೆಯಲ್ಲಿ ಬೇರೇನೂ ಇಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಯ್ಯ,ಸರ್ಕಲ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ, ಯೋಗಾನಂದ್,ದಲಿತ ಮುಖಂಡರಾದ ಗಂಗಾರಾಂ,ನಿಟ್ಟೂರು ರಂಗಸ್ವಾಮಿ,ಕೊಡಿಯಾಲ ಮಹದೇವ್, ನಾಗಭೂಷಣ್, ಲೋಕೇಶ್,ಮದು,ಕೀರ್ತಿ,ಮಂಜುನಾಥ್,ಕುಮಾರ್,ದೊಡ್ಡಯ್ಯ,ನಾಗರಾಜು ಹಾಗೂ ಎಲ್ಲಾ ದಲಿತ ಸಂಘಟನೆಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು..