ಪ್ರತಿಯೊಬ್ಬ ಸೋಂಕಿತನಿಗೂ ಸಕಾಲಕ್ಕೆ ಕೊರೋನಾ ಔಷಧ ಸಿಗಬೇಕು: ಡೀಸಿ ಸೂಚನೆ | ವಿಶ್ವ ಕನ್ನಡಿ

ತುಮಕೂರು: ಜಿಲ್ಲೆಯಲ್ಲಿ ಹೋಂ ಐಸೋಲೇಷನ್ ನ‌ಲ್ಲಿರುವವವರು ಸೇರಿದಂತೆ ಪ್ರತಿಯೊಬ್ಬ ಸೋಂಕಿತನಿಗೂ ಸಕಾಲಕ್ಕೆ ಔಷಧ ದೊರೆಯಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸುಶಿಕ್ಷಿತರು ಸಕಾಲಕ್ಕೆ ಔಷಧ ಪಡೆಯುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಬಹುತೇಕರು ಅನಕ್ಷರಸ್ಥರಿರುವ ಕಾರಣ ಕೊರೋನಾ ಸೋಂಕಿಗೆ ಔಷಧ ಪಡೆಯುವ ಜ್ಞಾನ ತಿಳಿದಿರುವುದಿಲ್ಲವಾದ್ದರಿಂದ ಎಲ್ಲರಿಗೂ ನೂರರಷ್ಟು ಔಷಧ ನೀಡಬೇಕು ಎಂದು ನಿರ್ದೇಶಿಸಿದರು.

ಮನೆಗಳಲ್ಲಿ ಐಸೋಲೇಷನ್‌ನಲ್ಲಿ ಇರುವವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಸೋಂಕಿನ ಎರಡನೇ ಅಲೆಯ ಸಂಪರ್ಕವನ್ನು ಕಡಿತ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಹೋಂ ಐಸೋಲೇಷನ್ ಇರುವವರ ಮನವೊಲಿಸಿ, ಕೂಡಲೇ ಅವರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಸೋಂಕಿತರಿಗೆ ಮಾರ್ಗಸೂಚಿಗಳನ್ವಯ ಪ್ರತ್ಯೇಕ ಸೌಲಭ್ಯಗಳ ವ್ಯವಸ್ಥೆಯಿದ್ದರೆ ಅಂತಹವರನ್ನು ಕೋವಿಡ್ ಕೇರ್ ಗೆ ಕರೆತರುವ ಅಗತ್ಯವಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಸೌಲಭ್ಯ ಇರುವುದಿಲ್ಲ. ಹಾಗಾಗಿ ಹೆಚ್ಚು ಕೋವಿಡ್ ಕೇರ್ ಸೆಂಟರ್ ಗೆ ಸೋಂಕಿತರನ್ನು ಕರೆತರಬೇಕು ಎಂದು ತಿಳಿಸಿದರು.

ಕೊರೋನಾ ಮೊದಲ ಅಲೆಯ ಮಾದರಿಯಂತೆಯೇ ಎರಡನೇ ಅಲೆಯ ಕೊರೋನಾ ಸಂದರ್ಭದಲ್ಲಿಯೂ ಕೋವಿಡ್ ಕೇರ್ ಗಳ ನಿರ್ವಹಣೆ ಸಮರ್ಪಕವಾಗಿ ನಡೆಯಬೇಕು. ಸೋಂಕಿಗೆ ತುತ್ತಾಗುವವರೆಲ್ಲರನ್ನೂ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಬೇಕು. ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ತಾಲೂಕು ಕಾರ್ಯಪಡೆ ಶ್ರಮವಹಿಸಿ ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಸೋಂಕಿತರಿಗೆ ಆಮ್ಲಜನಕ ನೀಡುವುದನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸೋಂಕಿತರಿಗೆ ಅಗತ್ಯವಿರುವಷ್ಟು ಮಾತ್ರ ಆಮ್ಲಜನಕ ನೀಡಬೇಕು‌. ಬೇಗ ಗುಣಮುಖರಾಗುತ್ತಾರೆಂಬ ಭಾವನೆಯಲ್ಲಿ ಅನಗತ್ಯವಾಗಿ ಹೆಚ್ಚು ಆಮ್ಲಜನಕ ನೀಡಬಾರದು. ಹೆಚ್ಚಿನ ಆಮ್ಲಜನಕ ನೀಡುವುದರಿಂದಲೂ ಸೋಂಕಿತರ ಜೀವಕ್ಕೆ ಸಮಸ್ಯೆಯಾಗಲಿದೆ ಎಂದು ತಿಳಿಸಿದರು.

ಲಾಕ್ ಡೌನ್ ಹಿನ್ನೆಲೆಯಲ್ಲಿ ಬಹುತೇಕ ಸ್ವಯಂ ಸೇವಕ ಸಂಘಗಳು, ದಾನಿಗಳು ಆಹಾರ ಕಿಟ್ ಸೇರಿದಂತೆ ಇತರೆ ನೆರವು ನೀಡಲು ಮುಂದಾಗುತ್ತಾರೆ. ಅವರೆಲ್ಲರಿಗೂ ವಿವೇಚನೆಯಿಂದ ಅವಕಾಶ ಮಾಡಿಕೊಡಬೇಕು. ಕಡಿವಾಣ ಹಾಕಬಾರದು ಎಂದು ನಿರ್ದೇಶಿಸಿದರು.

ಕೋವಿಡ್ ಚಿಕಿತ್ಸೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಬಿಲ್ ಗಳನ್ನು ಯಾರೂ ಬಾಕಿ ಉಳಿಸಿಕೊಳ್ಳಬಾರದು. ಆಮ್ಲಜನಕ ಸರಬರಾಜು ಮಾಡುವ ವಾಹನಗಳ ಬಿಲ್ ಗಳು ಸಕಾಲಕ್ಕೆ ಹಾಗೂ ಬಾಕಿ ಉಳಿದಿರುವ ಹಿಂದಿನ ವರ್ಷದ ಬಿಲ್ ಗಳನ್ನು ಮಂಜೂರು ಮಾಡಿಕೊಡಬೇಕು ಎಂದು ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಆದೇಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಮಾತನಾಡಿ,ಕಡ್ಡಾಯವಾಗಿ ಸೋಂಕಿತರ ಮನೆಗೆ ಹೋಗಿ ಪರಿಶೀಲನೆ ನಡೆಸಬೇಕು. ಸೋಂಕಿತರು ಪ್ರತ್ಯೇಕವಾಗಿ ಉಳಿಯುವ ಸೌಲಭ್ಯದ ವ್ಯವಸ್ಥೆಯಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸೌಲಭ್ಯಗಳಿಲ್ಲದಿದ್ದರೆ ಕೋವಿಡ್ ಕೇರ್ ಗೆ ಸ್ಥಳಾಂತರಿಸಿ ಕೊರೋನಾ ಸಂಪರ್ಕ ಕಡಿತಗೊಳಿಸಿ ಸೋಂಕಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಮಾತನಾಡಿ, ನೋಡಲ್ ಅಧಿಕಾರಿ ಸೇರಿದಂತೆ ಸ್ಥಳೀಯ ಮಟ್ಟದ ಅಧಿಕಾರಿಗಳ ಜೊತೆ ತಾಲೂಕು ಮಟ್ಟದ ಅಧಿಕಾರಿಗಳೂ ಜಂಟಿಯಾಗಿ ಕೋವಿಡ್ ಸೋಂಕಿತರ ಮನೆಗೆ ಭೇಟಿ ನೀಡಿ ಚಿಕಿತ್ಸೆ ಸಿಗುತ್ತಿರುವ ಮತ್ತು ಹೋಂ ಐಸೋಲೇಷನ್ ನಲ್ಲಿರಲು ಸೌಲಭ್ಯಗಳು ಸಮರ್ಪಕವಾಗಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಎಲ್ಲಾ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಲು ಹೋದಾಗ ಸೋಂಕಿತರ‌ನ್ನು ಕೋವಿಡ್ ಕೇರ್ ಗೆ ಕರೆತರಲು ಮನವೊಲಿಸಲು ಸುಲಭವಾಗುತ್ತದೆ. ಹಾಗಾಗಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ನಿರ್ದೇಶಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿ, ಸೋಂಕಿತರಿಗೆ ಅಗತ್ಯಕ್ಕೆ ಅನುಗುಣವಾಗಿಯೇ ಆಮ್ಲಜನಕ ನೀಡಬೇಕು. ರಾತ್ರಿ ಸಂದರ್ಭದಲ್ಲಿ ಆಕ್ಸಿಜನ್ ಅನಗತ್ಯ ಬಳಕೆಯಾಗುವ ಸಾಧ್ಯತೆಯಿದ್ದು ಜಾಗೃತಿ ವಹಿಸಬೇಕು. ಪ್ರತಿಯೊಬ್ಬ ಸೋಂಕಿತನಿಗೂ ಆಮ್ಲಜನಕ ನೀಡುವ ಬಗ್ಗೆ ನಿಗಾವಹಿಸಬೇಕು. ಮಾರ್ಗಸೂಚಿಗಳ ನಿರ್ದೇಶನಗಳನ್ವಯದಂತೆಯೇ ಆಮ್ಲಜನಕ ನೀಡಬೇಕು ಎಂದು ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್ ನಲ್ಲಿ ಉಪವಿಭಾಗಾಧಿಕಾರಿ ಅಜಯ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.