ಕೋವಿಡ್ ನಿಂದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಗುಣಮುಖ ಪ್ರಚಾರದಲ್ಲಿ ಭಾಗಿ

ತುಮಕೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಹಮ್ಮಿಕೊಳ್ಳಲಾಗುವುದು ಎಂದು ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ತಿಳಿಸಿದರು.

ಗೌಡಗೆರೆ ಹೋಬಳಿಯಲ್ಲಿ  ನಡೆಯಲಿರುವ ಜೆಡಿಎಸ್ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ ಅಭ್ಯರ್ಥಿ ಅಮಾಜಮ್ಮ ಅವರು ಕೋವಿಡ್ ನಿಂದ ಗುಣಮುಖರಾದ ನಂತರ ಪಾಲ್ಗೊಳ್ಳಲಿದ್ದಾರೆ, ಕಾರ್ಯಕ್ರಮದಲ್ಲಿ ಜೆಡಿಎಸ್ ನ ಜಿಲ್ಲಾ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಅಮ್ಮಾಜಮ್ಮ ಅವರು ಇಂದಿನಿಂದಲೇ ಚುನಾವಣಾ ಕಾರ್ಯದಲ್ಲಿ ಭಾಗವಹಿಸಲಿದ್ದು, ಹೋಬಳಿ ಮಟ್ಟ, ಗ್ರಾಮ ಮಟ್ಟದಲ್ಲಿ ಮತದಾರರನ್ನು ಭೇಟಿ ನೀಡಿ ಮತಯಾಚಿಸಲಾಗುವುದು ಎಂದು ಅವರು ತಿಳಿಸಿದರು. ದಲಿತರು ಹಾಗೂ ಮಹಿಳೆಯರು ಅಮ್ಮಾಜಮ್ಮ ಅವರಿಗೆ ಮತ ನೀಡುವ ಮೂಲಕ ಸಿರಾದಲ್ಲಿ ಸತ್ಯನಾರಾಯಣ ಅವರನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ವಿಜಯೇಂದ್ರ ಅವರು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬುದನ್ನು ಗೊತ್ತಿದೆ, ಜೆಡಿಎಸ್ ಸಹ ಎಲ್ಲ ಆಪರೇಷನ್ ಗೆ ಸಿದ್ಧವಿದ್ದು, ಪಕ್ಷದ ಕಾರ್ಯತಂತ್ರದ ಅಂಗವಾಗಿ ಮಧುಗಿರಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಠಿಕಾಣಿ ಹೂಡುವ ಮೂಲಕ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು. ಈಗಾಗಲೇ ಕಳ್ಳಂಬೆಳ್ಳ ಹೋಬಳಿ ಉಸ್ತುವಾರಿಯನ್ನು ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಒಳಗೊಂಡಂತೆ ಬಂಡೆಪ್ಪ ಕಾಶೆಂಪುರ್, ಎಂ.ಟಿ.ಕೃಷ್ಣಪ್ಪ, ಮಾಜಿ ಸಚಿವ ಶ್ರೀನಿವಾಸ್ ಅವರು ಸಹ ಇಂದಿನಿಂದ ಚುನಾವಣಾ ಪ್ರಚಾರ ಕೈಗೊಂಡಿದ್ದು, ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಗೌಡಗೆರೆ ಹೋಬಳಿಯಲ್ಲಿ ವಾಸ್ತವ್ಯ ಹೂಡುವ ಮೂಲಕ ಪಕ್ಷವನ್ನು ಗೆಲ್ಲಿಸಲು ಶ್ರಮಿಸಲಿದ್ದಾರೆ ಎಂದು ಹೇಳಿದರು. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ಚುನಾವಣೆ ಹಿನ್ನೆಲೆಯಲ್ಲಿ ಸಿರಾ ಆರ್ ಎಂಸಿಯಲ್ಲಿ ಜೆಡಿಎಸ್ ಮುಖಂಡರೊಂದಿಗೆ ಪ್ರಚಾರ ನಡೆಸಿದ್ದು, ಮತದಾರರನ್ನು ನೇರವಾಗಿ ಭೇಟಿ ಮಾಡುವ ಮೂಲಕ ಪಕ್ಷಕ್ಕೆ ಮತ ನೀಡುವಂತೆ ಮನವೊಲಿಸಲಾಗುವುದು ಎಂದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಸಾಲಮನ್ನಾ ಯೋಜನೆ ಮನದಟ್ಟಾಗಿದೆ, ಬಿಜೆಪಿ ಹಣದ ಹೊಳೆ ಹರಿಸಿದರು, ಸಿರಾ ಕ್ಷೇತ್ರದಲ್ಲಿ ಜೆಡಿಎಸ್ ಸೋಲಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟರು. ಸಿರಾ ಚುನಾವಣೆಯಲ್ಲಿ ಜೆಡಿಎಸ್ ಮೊದಲ ಸ್ಥಾನದಲ್ಲಿದೆ, ಪಕ್ಷದ ಕಾರ್ಯಕರ್ತರು ಜೊತೆಯಲ್ಲಿದ್ದು ಸಿರಾದಲ್ಲಿ ಅಮ್ಮಾಜಮ್ಮ ಪರ ಅಲೆ ಇದೆ, ಸತ್ಯನಾರಾಯಣ ಅವರ ಹೆಸರು ಉಳಿಸಲು, ನಮ್ಪ್ರಚಾರತ್ರವನ್ನು ಪಕ್ಷಕ್ಕೆ ಉಳಿಸಲು ಶ್ರಮಿಸುತ್ತೇನೆ ಎಂದರು. ಈ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಜಿ.ಪಂ.ಸದಸ್ಯ ರಾಮಕೃಷ್ಣ ಇತರರಿದ್ದರು.