ಕ್ರೀಡಾಪಟುಗಳನ್ನ ಕತ್ತಲೆಯಲ್ಲಿಟ್ಟಿ ಸ್ಮಾರ್ಟ್ಸಿಟಿಯಿಂದ ಅವೈಜ್ಞಾನಿಕ ಕ್ರೀಡಾಂಗಣ ನಿರ್ಮಾಣ | ವಿಶ್ವ ಕನ್ನಡಿ

ತುಮಕೂರು: ಸರಕಾರ ಹಾಗೂ ಸ್ಮಾರ್ಟ್‍ಸಿಟಿ ಅನುದಾನದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣ ಹಾಗೂ ಸುತ್ತಮುತ್ತಲ ಕ್ರೀಡಾ ಸಮುಚ್ಚಯಗಳ ನಿರ್ಮಾಣ ಕಾರ್ಯ ಅವೈಜ್ಞಾನಿಕವಾಗಿದ್ದು, ಸಾಟ್ರ್ಮಸಿಟಿ ಅಧಿಕಾರಿಗಳು ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಕ್ರೀಡಾಪಟುಗಳು ಮತ್ತು ಸಾರ್ವಜನಿಕರನ್ನು ಕತ್ತಲೆಯಲ್ಲಿಟ್ಟಿದ್ದಾರೆ ಎಂದು ತುಮಕೂರು ನಗರ ಕ್ರೀಡಾ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಆರ್.ಚಿಕ್ಕರಂಗಣ್ಣ ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸ್ಮಾರ್ಟ್‍ಸಿಟಿ ಅನುದಾನದಲ್ಲಿ ಹಳೆಯ ಕ್ರೀಡಾಂಗಣವನ್ನು ಕಿತ್ತು ಹಾಕಿ ಹೊಸ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ಕ್ರೀಡಾಂಗಣದ ಅಕ್ಕಪಕ್ಕದಲ್ಲಿದ್ದ ಸ್ಕೇಟಿಂಗ್, ಬ್ಯಾಸ್ಕೆಟ್‍ಬಾಲ್, ಕಬ್ಬಡಿ, ಬ್ಯಾಡ್ಮಿಂಟನ್ ಕೋರ್ಟುಗಳನ್ನು ಕಿತ್ತು ಹಾಕಲಾಗಿದೆ. ಈ ಅಂಕಣದಲ್ಲಿ ದಿನವೂ ಅಭ್ಯಾಸ ಮಾಡುತ್ತಿದ್ದ ಕ್ರೀಡಾಪಟು ಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇದರಿಂದ ಸಾಕಷ್ಟು ಕ್ರೀಡಾ ಚಟುವಟಿಕೆಗಳು ನಿಂತು ಹೋಗಿವೆ. ಈ ಬಗ್ಗೆ ಕ್ರೀಡಾ ಮತ್ತು ಯುವ ಜನ ಸೇವಾ ಅಧಿಕಾರಿಗಳು ಸಹ ಗಮನಹರಿಸುತ್ತಿಲ್ಲ. ಇದು ಜಿಲ್ಲೆಯ ಕ್ರೀಡಾ ಚಟುವಟಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಬ್ಯಾಡ್ಮಿಂಟನ್ ವುಡನ್ ಕೋರ್ಟು ನಿರ್ಮಾಣ ಮಾಡಲು 1 ಕೋಟಿ ರೂಗಳನ್ನು ನೀಡಲಾಗಿದೆ. ಜೀಮ್ ಮತ್ತು ಬ್ಯಾಡ್ಮಿಂಟನ್ ಕೋರ್ಟು ಇದ್ದ ಜಾಗದಲ್ಲಿ ಬೇರೆಯದನ್ನು ನಿರ್ಮಾಣ ಮಾಡಲಾಗುತ್ತಿದೆ.ಇದರ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಸದರಿ ಜಾಗದಲ್ಲಿ ಸರಕಾರಿ ಆದೇಶದಂತೆ ಮರದ ಬ್ಯಾಡ್ಮಿಂಟನ್ ಅಂಕಣ ನಿರ್ಮಿಸುವಂತೆ ಶಾಸಕರು,ಸಂಬಂಧಪಟ್ಟವರ ಬಳಿ ಮನವಿ ಮಾಡಿದರೂ ಯಾರಿಂದಲೂ ಸಮರ್ಪಕ ಉತ್ತರವಿಲ್ಲ. ನಗರದ ಹೃದಯ ಭಾಗದಲ್ಲಿರುವ ಈ ಅಂಕಣದಲ್ಲಿ ಹಿರಿಯ, ಕಿರಿಯ ಕ್ರೀಡಾಪಟುಗಳು ದಿನವೂ ಅಭ್ಯಾಸ ಮಾಡುತ್ತಿ ದ್ದರು. ಆದ್ದರಿಂದ ಸದರಿ ಅಂಕಣವನ್ನು ಉಳಿಸಿಕೊಡಬೇಕೆಂಬುದು ತುಮಕೂರು ನಗರ ಕ್ರೀಡಾ ರಕ್ಷಣಾ ವೇದಿಕೆಯ ಬೇಡಿಕೆಯಾಗಿದೆ ಎಂದು ಚಿಕ್ಕರಂಗಣ್ಣ ತಿಳಿಸಿದರು.

ಸುಮಾರು 45 ಕೋಟಿ ರೂ ವೆಚ್ಚದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ವಿವಿದೋದ್ದೇಶ ಕ್ರೀಡಾಂಗಣವನ್ನಾಗಿ ಹೊಸದಾಗಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕೇವಲ ಅಥ್ಲೇಟಿಕ್ ಕ್ರೀಡಾಪಟುಗಳಿಗೆ ಮಾತ್ರ ಅನುಕೂಲವಾಗುವಂತೆ ಸಿಂಥೆಟಿಕ್ ಟ್ರಾಕ್ ನಿರ್ಮಾಣ ಮಾಡಲಾಗುತ್ತಿದೆ.ಇದರಿಂದ ಬಡವರು,ಗ್ರಾಮೀಣ ಮಕ್ಕಳು ಸ್ಪೈಕ್ ಶೂ ಇಲ್ಲದ ಅಭ್ಯಾಸ ಮಾಡಲು ಸಾಧ್ಯವಿಲ್ಲ.ಅಲ್ಲದೆ ಬೇರೆ ಕ್ರೀಡೆಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ತುಮಕೂರು ನಗರಕ್ಕೆ ಸದ್ಯಕ್ಕೆ ಇರುವುದು ಒಂದೇ ಕ್ರೀಡಾಂಗಣ.ಹಾಗಾಗಿ ಇಲ್ಲಿ ಅಥ್ಲೆಟಿಕ್ ಸೇರಿದಂತೆ ಎಲ್ಲಾ ಕ್ರೀಡೆಗಳನ್ನು ಆಡಲು ಅವಕಾಶವಾಗುವಂತೆ ಅಂಕಣಗಳನ್ನು ನಿರ್ಮಿಸಬೇಕೆಂಬುದು ವೇದಿಕೆಯ ಒತ್ತಾಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ಕ್ರೀಡಾ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಬಿ.ಆರ್.ವೇಣುಗೋಪಾಲ್, ಉಪಾಧ್ಯಕ್ಷರಾದ ಪಿ.ಎನ್.ರಾಮಯ್ಯ, ಅನಿಲ್ ಕುಮಾರ್, ದೊಡ್ಡರಾಜು, ಕಾರ್ಯದರ್ಶಿ ಎಂ.ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ದೇವರಾಜು, ಲೋಕೇಶ್, ಶ್ರೀನಿವಾಸ್,ಖಜಾಂಚಿ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.