ತುಮಕೂರು: ಕೋಟೆ ನಾಡು ಸಿರಾದಲ್ಲಿ 70 ವರ್ಷದ ಬಳಿಕ ಕಮಲದ ಹೂವು ಅರಳಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿರಾದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‍ಗೌಡ ಅವರ ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿ ಗೆ ಮಾತನಾಡಿದ ಅವರು,ಸಿರಾ ಕ್ಷೇತ್ರದಲ್ಲಿ ಮತದಾರರು ಅಭಿವೃದ್ಧಿಗೋಸ್ಕರ ಬದಲಾವಣೆ ಬಯಸಿದ್ದಾರೆ. ಹಾಗಾಗಿ ಈ ಬಾರಿ ಕ್ಷೇತ್ರದ ಜನತೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಯನ್ನು ಬೆಂಬಲಿಸುತ್ತಾರೆ ಎಂದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸವಾಲವನ್ನು ಸ್ವೀಕರಿಸಲು ಬಿಜೆಪಿ ಸಿದ್ದವಾಗಿದೆ.ನಾವು ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಯನ್ನು ಗೆಲ್ಲುತ್ತೇವೆ, ಯಾವುದೇ ಜಾತಿ ಆಧಾರದ ಮೇಲೆ ಚುನಾವಣೆ ಎದುರಿಸಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ,ದೇಶದಲ್ಲಿ ನರೇಂದ್ರ ಮೋದಿ ಆಡಳಿತ, ರಾಜ್ಯದಲ್ಲಿ ಯಡಿಯೂರಪ್ಪನವರ ಆಡಳಿತವನ್ನು ಮೆಚ್ಚಿ ಸಿರಾ ಕ್ಷೇತ್ರದ ಜನತೆ 70 ವರ್ಷದ ನಂತರ ಬದಲಾವಣೆ ಬಯಸಿ ಬಿಜೆಪಿ ಗೆಲ್ಲಿಸುತ್ತಾರೆ.ನಮ್ಮ ಅಭ್ಯರ್ಥಿ ರಾಜೇಶ್‍ಗೌಡ ಅವರು 25 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತಾರೆ ಎಂಬ ಆತ್ಮವಿಶ್ವಾಸ ತಮಗಿದೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ಅಭಿವೃದ್ಧಿ ಮಾಡದೆ ಸಿರಾ ಕ್ಷೇತ್ರಕ್ಕೆ ಕಳಂಕ ತಂದಿದ್ದಾರೆ.ಇದನ್ನು ಬಿಜೆಪಿ ಅಭ್ಯರ್ಥಿಯಾಗಿರುವ ರಾಜೇಶ್‍ಗೌಡ ಅವರು ಸ್ವಚ್ಚ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದಾರೆ.ಸಿರಾ ಕ್ಷೇತ್ರದ ಮತದಾರರು ಭಾರತೀಯ ಜನತಾ ಪಕ್ಷವನ್ನು ಈ ಬಾರಿ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು. ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್‍ನಾರಾಯಣ ಮಾತನಾಡಿ, ಸಿರಾ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಡಾ. ರಾಜೇಶ್‍ಗೌಡ ಅವರ ಪರವಾಗಿರುವ ಅಲೆ ಕಂಡು ಬಂದಿದೆ. ರಾಜ್ಯದಲ್ಲಿ ಸ್ಥಿರವಾದ ಸರಕಾರ ಇದೆ. ಇದಕ್ಕೆ ಪೂರಕವಾಗಿ ಸಿರಾ ಕ್ಷೇತ್ರದಲ್ಲಿ ಬೆಂಬಲವನ್ನು ಬಯಸಿದ್ದೇವೆ. ಹಾಗಾಗಿ ಇಲ್ಲಿ ಕಮಲ ಅರಳುತ್ತದೆ. ಹಾಗೆಯೇ ನಾವು ಸಹ ಸಿರಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಏನೂ ಪ್ರಯೋಜನವಿಲ್ಲ ಎಂಬುದು ಸಿರಾ ಜನತೆಗೆ ಗೊತ್ತಿದೆ.ಆದ್ದರಿಂದ ಬಿಜೆಪಿ ಅಭ್ಯರ್ಥಿಗೆ ಮತ ಕೊಡಬೇಕು ಎಂದು ಮತದಾರರು ನಿರ್ಧರಿಸಿದ್ದಾರೆ.ಹಾಗಾಗಿ ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌq ಅವರನ್ನು ಗೆಲ್ಲಿಸುತ್ತಾರೆ. ಜೆಡಿಎಸ್ ಪಕ್ಷ ಸಿರಾದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಜನತೆ ಈ ಪಕ್ಷದ ಪರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದರು.
ಅಭ್ಯರ್ಥಿ,ಡಾ.ರಾಜೇಶ್‍ಗೌಡ ಮಾತನಾಡಿ, ಸಿರಾ ತಾಲೂಕಿನ ಜನತೆ ನನಗೆ ಅಭೂತಪೂರ್ವ ವಿಶ್ವಾಸ, ಬೆಂಬಲ ವ್ಯಕ್ತಪಡಿಸಿದ್ದಾರೆ.ನ. 3 ರಂದು ನಡೆಯುವ ಉಪಚುನಾವಣೆಯಲ್ಲಿ ಸಿರಾ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ಕೇಸರಿ ಪತಾಕೆ ಹಾರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶ್‍ಗೌಡ, ಸಂಸದ ವೈ.ಎ. ನಾರಾಯಣಸ್ವಾಮಿ, ಮುಖಂಡರಾದ ಬಿ.ಕೆ. ಮಂಜುನಾಥ್, ಎಸ್.ಆರ್.ಗೌಡ, ಮತ್ತಿತರರು ಪಾಲ್ಗೊಂಡಿದ್ದರು.