ಶಿರಾ ಉಪಚುನಾವಣೆ: ನಿಯೋಜಿತ ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳಿಗೆ ಬಸ್ಸು ವ್ಯವಸ್ಥೆ

ತುಮಕೂರು: ನವೆಂಬರ್ 3ರಂದು ನಡೆಯಲಿರುವ ಶಿರಾ ವಿಧಾನಸಭಾ ಉಪ ಚುನಾವಣೆಯ ಚುನಾವಣಾ ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತುಮಕೂರು ನಗರ ಹಾಗೂ ಗುಬ್ಬಿ ಪಟ್ಟಣದಿಂದ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳಿಗೆ ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹಾಗೂ ಗುಬ್ಬಿ ಪಟ್ಟಣದಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ನವೆಂಬರ್ 2 ರಂದು ಬೆಳಿಗ್ಗೆ 6.30 ಗಂಟೆಗೆ ಬಸ್ಸುಗಳು ಹೊರಡಲಿವೆ. ಬಸ್ ಹೊರಡುವ ಸಮಯದ ನಂತರ ಬರುವ ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳು ತಾವೇ ಸ್ವತಃ ಪ್ರಯಾಣದ ವ್ಯವಸ್ಥೆ ಮಾಡಿಕೊಂಡು ನಿಗಧಿತ ಸಮಯಕ್ಕೆ ಶಿರಾ ಮಸ್ಟರಿಂಗ್ ಕೇಂದ್ರವನ್ನು ತಲುಪಬೇಕು.  ಈ ಕುರಿತು ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ನೋಡಲ್ ಅಧಿಕಾರಿ ನಾಗೇಶ್ (ಮೊ.ಸಂ.9980807199) ಅವರನ್ನು ಸಂಪರ್ಕಿಸುವುದು ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಇಲಾಖಾ ಮುಖ್ಯಸ್ಥರುಗಳು ಕಡ್ಡಾಯವಾಗಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ತಮ್ಮ ವ್ಯಾಪ್ತಿಯ ಅಧಿಕಾರಿ/ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಸೂಚಿಸಿ ಬಿಡುಗಡೆ ಮಾಡಬೇಕು. ಎಲ್ಲಾ ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಚುನಾವಣಾ ಕಾರ್ಯದಲ್ಲಿ ಭಾಗವಹಿಸುವುದು, ಯಾವುದಾದರೂ ಮತಗಟ್ಟೆ ಅಧಿಕಾರಿ/ಸಿಬ್ಬಂದಿಗಳ ಆದೇಶದಲ್ಲಿ ಮಾರ್ಪಾಡು/ ಬದಲಿ ವ್ಯವಸ್ಥೆಯನ್ನು ಜಿಲ್ಲಾಧಿಕಾರಿ/ ಜಿಲ್ಲಾ ನೋಡಲ್ ಅಧಿಕಾರಿ ದೃಢೀಕರಿಸಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಪಾಡು/ ಬದಲಿ ವ್ಯವಸ್ಥೆ ಅಧಿಕೃತವಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮತಗಟ್ಟೆ ತಂಡಗಳಿಗೆ ಹಂಚಿಕೆಯಾಗುವ ಮತಗಟ್ಟೆ ವಿವರಗಳನ್ನು ನವೆಂಬರ್ 2ರಂದು ಮಸ್ಟರಿಂಗ್ ಕೇಂದ್ರವಾದ ಶಿರಾದ ಜ್ಯೋತಿನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಕಟಿಸಲಾಗುವುದು. ಯಾವುದೇ ನಿಯೋಜಿತ ಅಧಿಕಾರಿ/ನೌಕರರು ಚುನಾವಣಾ ಕಾರ್ಯಕ್ಕೆ ಗೈರು ಹಾಜರಾದಲ್ಲಿ ಅವರುಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1951 ರೀತ್ಯಾ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.