ಶಿರಾ ಉಪ ಚುನಾವಣೆ: ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ: ಡೀಸಿ ರಾಕೇಶ್ ಕುಮಾರ್

ತುಮಕೂರು:  ನವೆಂಬರ್ 3ರಂದು ನಡೆಯುವ ಶಿರಾ ವಿಧಾನಸಭಾ ಉಪ ಚುನಾವಣೆಯ ಚುನಾವಣಾ ಮತದಾನವನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತವು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣಾ ಮತದಾನವು ನವೆಂಬರ್ 3 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಡೆಯಲಿದ್ದು, ಪುರುಷರು 1,10,281 ಮಹಿಳೆಯರು 105434, ಇತರೆ 10 ಒಟ್ಟು 215725 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಮತದಾನ ಮಾಡುವ ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುವುದು ಎಂದರು.

ಚುನಾವಣಾ ಮತದಾನಕ್ಕೆ 330 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 6 ವಲ್ನರೆಬಲ್, 64 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ.  ಈ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್ಸ್/ ವಿಡಿಯೋಗ್ರಫಿ ಹಾಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಕ್ತ ಮತ್ತು ಶಾಂತಿಯುತ ಮತದಾನವನ್ನು ನಡೆಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ತಾಲ್ಲೂಕಿನಾದ್ಯಂತ  ನವೆಂಬರ್ 3ರ ಮಧ್ಯರಾತ್ರಿ 12 ಗಂಟೆಯವರೆಗೆ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಈ ಆದೇಶವು ನವೆಂಬರ್ 3ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿರುವ ಮತದಾನ ಕೇಂದ್ರಗಳ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

ನವೆಂಬರ್ 1 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗಿದ್ದು,  ಯಾವುದೇ ರಾಜಕೀಯ ಪಕ್ಷಗಳು/ ಉಮೇದುವಾರರು/ ಕಾರ್ಯಕರ್ತರು ಅಥವಾ ಇತರರು ಯಾವುದೇ ಬಹಿರಂಗ ಚುನಾವಣಾ ಪ್ರಚಾರ ನಡೆಸತಕ್ಕದ್ದಲ್ಲ.  ಗಡುವು ಮುಕ್ತಾಯದ ನಂತರ ಬಹಿರಂಗ ಪ್ರಚಾರ ಕೈಗೊಂಡಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಚುನಾವಣಾ ಬಹಿರಂಗ ಪ್ರಚಾರ ಮುಕ್ತಾಯವಾದ ಗಡುವಿನ ನಂತರ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಈ  ವಿಧಾನಸಭಾ ಕ್ಷೇತ್ರದಲ್ಲಿ ಉಳಿಯುವಂತಿಲ್ಲ.  ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿರುವ ಮತದಾರರಲ್ಲದ ಹೊರಗಿನ ರಾಜಕೀಯ ಕಾರ್ಯಕರ್ತರು/ ಮುಖಂಡರು ಬಹಿರಂಗ ಪ್ರಚಾರದ ಗಡುವು ಮುಕ್ತಾಯದ ನಂತರ ಶಿರಾ ವಿಧಾನಸಭಾ ಕ್ಷೇತ್ರವನ್ನು ಬಿಡುವಂತೆ ಈಗಾಗಲೇ ಆದೇಶ ನೀಡಲಾಗಿದೆ.  ಆದೇಶವನ್ನು ಅನುಷ್ಟಾನಗೊಳಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಶಿರಾ ವಿಧಾನಸಭಾ ಉಪ ಚುನಾವಣೆ ಮತದಾನಕ್ಕೆ ತುಮಕೂರು ಹಾಗೂ ಗುಬ್ಬಿ ತಾಲ್ಲೂಕುಗಳಿಂದ 397 ಪ್ರಿಸೈಡಿಂಗ್ ಅಧಿಕಾರಿಗಳು ಸೇರಿದಂತೆ 1588 ಮತಗಟ್ಟೆ ಸಿಬ್ಬಂದಿಗಳನ್ನು ನೇಮಿಸಲಾಗಿದೆ.  ಈಗಾಗಲೇ ಈ ಸಿಬ್ಬಂದಿಗಳಿಗೆ 2 ಬಾರಿ ತರಬೇತಿ ನೀಡಲಾಗಿದೆ. ಶಿರಾದ ಮಸ್ಟರಿಂಗ್ ಕೇಂದ್ರವಾದ ಜ್ಯೋತಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಲು  ಕೆ.ಎಸ್.ಆರ್.ಟಿ.ಸಿ. ಬಸ್‍ಗಳ ವ್ಯವಸ್ಥೆ ಮಾಡಲಾಗಿದೆ.  ಒಟ್ಟಾರೆ 50 ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ತುಮಕೂರು ಹಾಗೂ ಗುಬ್ಬಿಯಿಂದ ಬಸ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತ್ತು ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು 5100 ಅರ್ಜಿಗಳು ಬಂದಿದ್ದವು.  ಈ ಪೈಕಿ 2 ಬಾರಿ ಅರ್ಜಿದಾರರ ಮನೆಗಳಿಗೆ ತೆರಳಿದಾಗ 80 ವರ್ಷ ಮೇಲ್ಪಟ್ಟ 2674, ಅಂಗವಿಕಲರು 2042 ಹಾಗೂ ಕೋವಿಡ್ ಸೋಂಕಿತ 105 ಸೇರಿದಂತೆ ಕೇವಲ 4821 ಮಂದಿ ಮತದಾರರು ಅಂಚೆ ಮತ ಪತ್ರದ ಮೂಲಕ ಮತ ಚಲಾಯಿಸಿದ್ದಾರೆಂದು ಮಾಹಿತಿ ನೀಡಿದ ಅವರು, ಶಿರಾ ವಿಧಾನ ಸಭಾ ಉಪ ಚುನಾವಣೆಯನ್ನು ಶಾಂತಿಯುತವಾಗಿ ನೆರವೇರಿಸಲು 10 ಸ್ಥಳಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ.  5 ಎಫ್‍ಎಸ್‍ಟಿ ಟೀಮ್‍ಗಳು, 10 ಎಸ್.ಎಸ್.ಟಿ. ಟೀಮ್‍ಗಳು, 3 ವಿಎಸ್‍ಟಿ, 1 ವಿವಿಟಿ, ಹಾಗೂ 28 ಸೆಕ್ಟರ್ ಆಫೀಸರ್‍ಗಳನ್ನು ಮತ್ತು 52 ಮಂದಿ ಹೆಚ್ಚುವರಿ ಹೋಬಳಿವಾರು ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಅಬಕಾರಿ ಇಲಾಖೆಯಿಂದ ಇಲ್ಲಿಯವರೆಗೂ 243 ಪ್ರಕರಣಗಳನ್ನು ದಾಖಲಿಸಿ 500.838 ಐ.ಎಂ.ಎಲ್. ಮದ್ಯ, 14.360 ಲೀ. ಬಿಯರ್ ಹಾಗೂ 6 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.  69,40,000 ನಗದನ್ನು ವಶಪಡಿಸಿಕೊಳ್ಳಲಾಗಿದೆ.  ಕೋವಿಡ್-19/ನೀತಿ ಸಂಹಿತೆ ಉಲ್ಲಂಘನೆ ಮಾಡಿದ 19 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಈ ಪೈಕಿ 8 ಎಫ್‍ಐಆರ್, 11 ಎನ್‍ಸಿಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಕೋವಿಡ್ ನಿಯಮಾವಳಿಯನ್ನು ಉಲ್ಲಂಘನೆ ಮಾಡಿವೆ.  ಈಗಾಗಲೇ ಇವರಿಗೆ ತಿಳುವಳಿಕೆ ಪತ್ರ ಬರೆಯಲಾಗಿದೆ.  ಇವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು.  ಶಿರಾ ವಿಧಾನಸಭಾ ಕ್ಷೇತ್ರವು ಆಂಧ್ರಪ್ರದೇಶದ 34 ಕಿ.ಮೀ. ಗಡಿಯನ್ನು ಹಂಚಿಕೊಂಡಿದ್ದು, ಚುನಾವಣಾ ಅಕ್ರಮಗಳನ್ನು ತಡೆಯುವ ಸಂಬಂಧ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ವ್ಯಾಪಕ ಕಟ್ಟೆಚ್ಚರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ನವೆಂಬರ್ 2 ಮತ್ತು 3ನೇ ತಾರೀಖಿನಂದು ಮುದ್ರಣ ಮಾಧ್ಯಮದಲ್ಲಿ ಜಾಹೀರಾತುಗಳನ್ನು ನೀಡ ಬಯಸುವ ರಾಜಕೀಯ ಪಕ್ಷಗಳು ಎಂಸಿಎಂಸಿಯ ಪೂರ್ವ ದೃಢೀಕರಣವಿಲ್ಲದೆ ಪ್ರಕಟಿಸುವಂತಿಲ್ಲ ಎಂದ ಅವರು, ಪ್ರತಿ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಪ್ರತಿ ಮತಗಟ್ಟೆಗೆ ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಆರೋಗ್ಯಾಧಿಕಾರಿ ರೌಂಡ್ಸ್‍ನಲ್ಲಿದ್ದು, ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿಗಾ ವಹಿಸಲಿದ್ದಾರೆ. ಮತದಾನ ಮಾಡಲು ಬರುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮತಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು.  ಸ್ಯಾನಿಟೈಸ್ ಮಾಡಿದ ನಂತರ ಮತದಾನ ಮಾಡಲು ಮತದಾರರಿಗೆ ಒಂದು ಕೈಗವಸು ನೀಡಲಾಗುವುದು. ಮತಗಟ್ಟೆಯಲ್ಲಿ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್/ವೃತ್ತಗಳನ್ನು ಹಾಕಲಾಗಿದೆ. ಮತದಾರರು ಕೊರೋನಾ ಮುಂಜಾಗ್ರತಾ ನಿಯಮಗಳನ್ನು ಪಾಲಿಸಬೇಕು.  ಕೋವಿಡ್ ಸೋಂಕಿತರು/ಶಂಕಿತರ ಮತದಾನಕ್ಕಾಗಿ ಮತದಾನದ ಅವಧಿಯ ಕೊನೆಯ 1 ಗಂಟೆಯನ್ನು ಮೀಸಲಿಡಲಾಗಿದೆ.  ಇದಕ್ಕಾಗಿ ಮತಗಟ್ಟೆಯ ಸಿಬ್ಬಂದಿಗಳಿಗೆ ಪಿಪಿಕಿಟ್‍ಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಶಿರಾ ಚುನಾವಣಾ ಮತದಾನದ ನಂತರ ಮತ ಯಂತ್ರಗಳನ್ನು ತುಮಕೂರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಿರುವ ಎಣಿಕಾ ಕೇಂದ್ರಕ್ಕೆ ಸ್ಥಳಾಂತರಿಸಿ 3 ಲೇಯರ್‍ನ ಗಾರ್ಡ್ ಬಂದೋಬಸ್ತ್‍ನಲ್ಲಿ ಇಡಲಾಗುವುದು.  ನವೆಂಬರ್ 10 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.