ಶಿರಾ ಕೋಟೆಯ ಮೇಲೆ ಬಿಜೆಪಿಯ ಬಾವುಟ | ಅಭ್ಯರ್ಥಿಗಳು ಪಡೆದ ಮತಗಳ ಪೂರ್ತಿ ಮಾಹಿತಿ | ವಿಶ್ವ ಕನ್ನಡಿ

ತುಮಕೂರು: ಶಿರಾ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಡಾ: ಸಿ.ಎಂ.ರಾಜೇಶ್‍ಗೌಡ  ಅವರು 76564 ಮತಗಳನ್ನು ಗಳಿಸಿವು ಮೂಲಕ ಶಿರಾ ಕೋಟೆಯ ಮೇಲೆ ಬಿಜೆಪಿಯ ಬಾವುಟ ಹಾರಿಸಿದ್ದರೆ, 70 ವರ್ಷಗಳ ನಂತರ ಶಿರಾದಲ್ಲಿ ಬಿಜೆಪಿ ಗೆಲುವು  ಸಾಧಿಸಿದ ಕಾರ್ಯಕರ್ತರ ಸಂತೋಷ ಮುಗಿಲು ಮುಟ್ಟಿದೆ.

ಒಟ್ಟು 24 ಸುತ್ತಿನಲ್ಲಿ ನಡೆದ ಈ ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಡಾ: ಸಿ.ಎಂ. ರಾಜೇಶ್‍ಗೌಡ ಅವರು 13,414 ಮತಗಳ ಅಂತರದಿಂದ ಸಮೀಪದ ಕಾಂಗ್ರೇಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರನ್ನು ಪರಾಭವಗೊಳಿಸಿದ್ದಾರೆ.

ಶಿರಾ ಉಪಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿಯ ಡಾ: ಸಿ.ಎಂ. ರಾಜೇಶ್ ಗೌಡ ಅವರಿಗೆ ಚುನಾವಣಾಧಿಕಾರಿ ಡಾ: ನಂದಿನಿದೇವಿ ಕೆ. ಅವರು ಪ್ರಮಾಣ ಪತ್ರ ನೀಡಿದರು.

ಚುನಾವಣೆಯಲ್ಲಿ ಸ್ಪರ್ಧಿಸಿದ್ದ 15 ಅಭ್ಯರ್ಥಿಗಳ ಪೈಕಿ ಡಾ: ಸಿ.ಆರ್. ರಾಜೇಶ್‍ಗೌಡ ಅವರು 76564 ಅತಿ ಹೆಚ್ಚು ಮತ ಪಡೆಯುವ ಮೂಲಕ ಜಯಶಾಲಿಯಾಗಿದ್ದಾರೆ.  ಉಳಿದಂತೆ ಜನತಾದಳ(ಜಾತ್ಯಾತೀತ) ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ-36783, ಭಾರತ ಕಮ್ಯುನಿಸ್ಟ್ ಪಕ್ಷದ ಗಿರೀಶ್-1697, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಟಿ.ಬಿ. ಜಯಚಂದ್ರ-63150,  ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಓಬಳೇಶಪ್ಪ ಬಿ.ಟಿ.-628, ರೈತ ಭಾರತ ಪಕ್ಷದ ತಿಮ್ಮಕ್ಕ-220, ರಿಪಬ್ಲಿಕನ್ ಸೇನೆಯ ಪ್ರೇಮಕ್ಕ-106, ಪಕ್ಷೇತರರಾದ ಅಂಬ್ರೋಸ್ ಡಿ. ಮೆಲ್ಲೋ-123, ಎಂ.ಎಲ್.ಎ.ಆರ್.ಕಂಬಣ್ಣ-135, ಗುರುಸಿದ್ದಪ್ಪ ಎಂ.-175, ಜಯಣ್ಣ-221, ಎಲ್.ಕೆ.ದೇವರಾಜು-578, ಜಿ.ಎಸ್.ನಾಗರಾಜ-436, ರಂಗಪ್ಪ-212, ಸಾದಿಕ್ ಪಾಷ ಅವರು 568 ಮತಗಳನ್ನು ಗಳಿಸಿದ್ದರೆ, 643 ನೋಟಾ ಮತಗಳಾಗಿವೆ.

ಶಿರಾ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ. ಸತ್ಯ ನಾರಾಯಣ್ ಅವರು ನಿಧನದಿಂದ ತೆರವಾದ ಸ್ಥಾನಕ್ಕೆ ಕಳೆದ ನವೆಂಬರ್ 3ರಂದು ಉಪ ಚುನಾವಣಾ ಮತದಾನ ನಡೆಸಲಾಗಿತ್ತು. ಈ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿತ್ತು.

ಮತ ಎಣಿಕೆಗಾಗಿ ನಿಯೋಜಿಸಿದ್ದ ಅಧಿಕಾರಿ/ಸಿಬ್ಬಂದಿ ಸೇರಿದಂತೆ ಅಭ್ಯರ್ಥಿ ಹಾಗೂ ಅಭ್ಯರ್ಥಿಗಳ ಏಜೆಂಟ್‍ಗಳನ್ನು ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಿ,  ಎಣಿಕಾ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು.   ಮೊದಲಿಗೆ ಪ್ರತ್ಯೇಕ ಕೊಠಡಿಯಲ್ಲಿ 4 ಟೇಬಲ್‍ಗಳಲ್ಲಿ ಅಂಚೆ ಮತಪತ್ರ ಹಾಗೂ ಸೇವಾ ಮತಗಳನ್ನು ಎಣಿಕೆ ಮಾಡಲಾಯಿತು.  ನಂತರ 8-30 ರಿಂದ    2 ಕೊಠಡಿಗಳಲ್ಲಿ 14 ಟೇಬಲ್‍ಗಳಲ್ಲಿ ಮತಯಂತ್ರ(ಇವಿಎಂ) ಮತ ಎಣಿಕೆಯನ್ನು ನಡೆಸಲಾಯಿತು. ಅಭ್ಯರ್ಥಿಗಳ ಅನುಕೂಲಕ್ಕಾಗಿ ಮತ ಎಣಿಕಾ ಕೇಂದ್ರದ ಆವರಣದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಮತ ಎಣಿಕಾ ಟೇಬಲ್‍ಗೆ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್‍ನಂತೆ ಹಾಜರಿರಲು ಅವಕಾಶ ನೀಡಲಾಗಿತ್ತು.

ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕಿ ಬಿ. ಮಹೇಶ್ವರಿ, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಶಿರಾ ತಹಶೀಲ್ದಾರ್ ಮಮತ ಮತ್ತಿತರರು ಹಾಜರಿದ್ದರು.