ಸಿರಾ: ಎರಡು ರಾಷ್ಟ್ರೀಯ ಪಕ್ಷಗಳು ಎಷ್ಟೇ ಹಣದ ಹೊಳೆ ಹರಿಸಿದರೂ ಕೂಡ ಶಿರಾ ಕ್ಷೇತ್ರದ ಜನತೆ ಹಣಕ್ಕೆ ಬಲಿಯಾಗುವವರಲ್ಲ, ಶ್ರಮಕ್ಕೆ ಬೆಲೆ ಕೊಡುತ್ತಾರೆ. ಈ ಹಿಂದೆ ಸತ್ಯನಾರಾಯಣ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ಕೈಯಿಂದ ಹಣ ಖರ್ಚು ಮಾಡಿ ಚುನಾವಣೆ ಮಾಡಿದ್ದಾರೆ. ಈ ಬಾರಿ ಪಾಪದ ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಕ್ಷೇತ್ರದ ಜನತೆ ಸಾಬೀತು ಪಡಿಸಲಿದ್ದಾರೆ ಎಂದು ಮಾಜಿ ಮುಖ್ಯಮುಂತ್ರಿ ಹೇಳಿದರು. ಶಿರಾ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗೂ ತೆರಳಿ ನಾನು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರ ನಡೆಸುತ್ತೇವೆ. ಕ್ಷೇತ್ರದ ಮತದಾರರ ವಿಶ್ವಾಸ ಗಳಿಸಲು ಅಧಿಕೃತವಾಗಿ ನಾವು ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ನಾವು ಸಕ್ರಿಯವಾಗಿ ಪಕ್ಷದ ಪರವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇವೆ. ಒಂದು ವಾರ ಕಾಲ ಶಿರಾ ಕ್ಷೇತ್ರದಲ್ಲಿದ್ದು ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡ ಆಲದಮರ ಗ್ರಾಮದಲ್ಲಿ ಜೆಡಿಎಸ್ ಕಚೇರಿಯನ್ನು ಉದ್ಘಾಟಸಿ ನಂತರ ನೂರಾರು ಕಾರ್ಯಕರ್ತರನ್ನು ಉದ್ದೇಶಿಸಿ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ನಾನು ಮೊಕ್ಕಾಂ ಹೂಡುವೆ, ನಿತ್ಯ ಒಂದಿಲ್ಲೊಂದು ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವೆ ಎಂದು ತಿಳಿಸಿದ ದೇವೇಗೌಡರು, ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡುತ್ತಿವೆ. ಅವರ ದಾಳಿಗೆ ಪ್ರತ್ಯುತ್ತರವಾಗಿ ಎಲ್ಲ ವಿಷಯವನ್ನು ಪ್ರಸ್ತಾಪಿಸಿ ಮಾತ ನಾಡೋಕೆ ನಾನು ಸಿದ್ಧನಿದ್ದೇನೆ ಎಂದು ತಿಳಿಸಿದರು. ಚುನಾವಣೆ ಮುಗಿಯುವವರೆಗೂ ಹತ್ತು ದಿನಗಳ ಕಾಲ ಕ್ಷೇತ್ರದಲ್ಲಿಯೇ ಇರುತ್ತೇನೆ.ಯಾರ್ಯಾರು ಏನೇನು ದಾಳಿ ಮಾಡುತ್ತಾರೋ ಅವರಿಗೆ ಉತ್ತರ ಕೊಡಕ್ಕೆ ನಾನು ಇಲ್ಲೇ ಇರುತ್ತೇನೆ. ನಾನು ದಾರಿ ತಪ್ಪಿ ಮಾತನಾಡುವುದಿಲ್ಲ ನಡೆದ ಘಟನಾವಳಿಗಳನ್ನು ಹೇಳುವುದಕ್ಕೆ ನನಗೆ ಯಾವ ಭಯವಿಲ್ಲ ಎಂದು ಹೆಚ್.ಡಿ.ದೇವೇಗೌಡ ಸಮರ್ಥವಾಗಿ ಉತ್ತರ ಕೊಡೋಕೆ ಈಗಲೂ ಶಕ್ತಿ ನನಗಿದೆ. ಆ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.
