ಉಪಚುನಾವಣೆ: ಜಿಲ್ಲೆಯಲ್ಲಿ 384ಲೀ ಮದ್ಯ,4.7ಲೀ ಬಿಯರ್ ವಶ

ತುಮಕೂರು: ಶಿರಾ ವಿಧಾನಸಭಾ ಉಪಚುನಾವಣೆ-2020 ಮತ್ತು ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 13ರವರೆಗೆ ಜಿಲ್ಲೆಯಲ್ಲಿ ಸಿರಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ಒಟ್ಟು 12 ಘೋರ ಪ್ರಕರಣಗಳು, 85 15(ಎ) ಪ್ರಕರಣಗಳು, 12 ಬಿಎಲ್‍ಸಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, 384.030 ಲೀಟರ್ ಮದ್ಯ ಹಾಗೂ 4.780 ಲೀಟರ್ ಬಿಯರ್ ಮತ್ತು 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ಇತ್ಯಾದಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯ ಅಬಕಾರಿ ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಬಕಾರಿ ಉಪ ಆಯುಕ್ತರ ಕಛೇರಿ ತುಮಕೂರು ಹಾಗೂ ಅಬಕಾರಿ ನಿರೀಕ್ಷಕರ ಕಛೇರಿ ಶಿರಾ ವಲಯದಲ್ಲಿ ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ. ಅಬಕಾರಿ ಉಪ ಆಯುಕ್ತರ ಕಛೇರಿ ಕಂಟ್ರೋಲ್ ರೂಂ ನಂಬರ್ 0816-2272927, ಅಬಕಾರಿ ನಿರೀಕ್ಷಕರ ಕಛೇರಿ ಶಿರಾ ವಲಯ ಕಂಟ್ರೋಲ್ ರೂಂ ನಂಬರ್ +91-7338153381 ಹಾಗೂ ಅಬಕಾರಿ ಇಲಾಖೆಯ ಟೋಲ್ ಫ್ರೀ ನಂಬರ್ 1800-4252-550 ಆಗಿದೆ ಎಂದು ತಿಳಿಸಿದ್ದಾರೆ. ಶಿರಾ ವಿಧಾನಸಭಾ ಉಪ ಚುನಾವಣೆ ಸಂಬಂಧ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.  ಕಂದಾಯ ಇಲಾಖೆಯಿಂದ ಒಟ್ಟು 10 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ಸದರಿ ಚೆಕ್‍ಪೋಸ್ಟ್‍ಗಳಿಗೆ ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಅಬಕಾರಿ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅಬಕಾರಿ ಇಲಾಖೆಯ ಎಲ್ಲಾ ಉಪ ವಿಭಾಗ ಹಾಗೂ ವಲಯ ಮಟ್ಟದಲ್ಲಿ ಪ್ಲೈಯಿಂಗ್ ಸ್ಕ್ವಾಡ್ ಟೀಮ್ (ಈSಖಿ) ಗಳನ್ನು ರಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.