ಶಿರಾ ಉಪಚುನಾವಣೆ ಗೆಲ್ಲಲು ಜೆಡಿಎಸ್ ರಣತಂತ್ರ

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವಿಗೆ ಟೊಂಕ ಕಟ್ಟಿರುವ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಅವರು ಈಗಾಗಲೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದು, ಜೆಡಿಎಸ್ ಮುಖಂಡರಿಗೆ ಹೋಬಳಿವಾರು ಉಸ್ತುವಾರಿ ನೀಡಿ, ಜೆಡಿಎಸ್‍ಗೆ ಮುನ್ನಡೆ ನೀಡುವ ಹೊಣೆಗಾರಿಕೆ ನೀಡಿದ್ದಾರೆ. ಹುಲಿಕುಂಟೆ ಹೋಬಳಿ ಉಸ್ತುವಾರಿಯನ್ನು ವಹಿಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಕಳ್ಳಂಬೆಳ್ಳ ಹೋಬಳಿ ಉಸ್ತುವಾರಿ ವಹಿಸಿಕೊಂಡಿರುವ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರ ನೇತೃತ್ವದಲ್ಲಿ ಈಗಾಗಲೇ ಯುವ ಜೆಡಿಎಸ್ ಕಾರ್ಯಕರ್ತರ ಸಂಘಟನೆಯನ್ನು ಮಾಡಲಾಗುತ್ತಿದ್ದು, ಗೌಡಗೆರೆ ಹೋಬಳಿಯಲ್ಲಿ ಪ್ರಜ್ವಲ್ ರೇವಣ್ಣ ಅವರು ವಾಸ್ತವ್ಯ ಹೂಡಿದ್ದು, ಗೌರಿಶಂಕರ್ ಅವರು ಈಗಾಗಲೇ ದೊಡ್ಡಾಲದಮರದಲ್ಲಿ ಜೆಡಿಎಸ್ ಪಕ್ಷದ ಕಚೇರಿಯನ್ನು ತೆರೆಯುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದು, ಉಪಚುನಾವಣೆಯಲ್ಲಿ ಕಳ್ಳಂಬೆಳ್ಳ ಹೋಬಳಿಯಲ್ಲಿ ಅತ್ಯಧಿಕ ಮುನ್ನಡೆಯನ್ನು ಪಕ್ಷಕ್ಕೆ ದೊರಕಿಸುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರೊಂದಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳ್ಳಂಬೆಳ್ಳ ಹೋಬಳಿಯ ಪ್ರಮುಖ ಮುಖಂಡರೊಂದಿಗೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಜೆಡಿಎಸ್ ಭದ್ರಕೋಟೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರು ತರೂರು, ಬ್ರಹ್ಮಸಂದ್ರ, ಕಳ್ಳಂಬೆಳ್ಳ, ದೊಡ್ಡಾಲದಮರ, ಯತ್ತಪ್ಪನಟ್ಟಿ, ದೊಡ್ಡ ಅಗ್ರಹಾರ, ಶೀಬಿ ಅಗ್ರಹಾರ ಸೇರಿದಂತೆ ಹಲವು ಪ್ರಮುಖ ಗ್ರಾಮಗಳಲ್ಲಿ ಪ್ರಚಾರ ಸಭೆಯನ್ನು ನಡೆಸುವ ಮೂಲಕ ಜೆಡಿಎಸ್ ಪರ ಮತಯಾಚನೆ ಮಾಡಿದ್ದಾರೆ.

https://vishwakannadi.com/

ಪಕ್ಷ ಸಂಘಟನೆಗೆ ಒತ್ತು: ಸಿರಾ ಶಾಸಕರಾಗಿದ್ದ ದಿ.ಸತ್ಯನಾರಾಯಣ್ ಅವರ ಅಕಾಲಿಕ ನಿಧನದಿಂದ ಸಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಸಮರ್ಥ ನಾಯಕತ್ವದೊಂದಿಗೆ ಪಕ್ಷ ಸಂಘಟನೆಗೆ ವರಿಷ್ಠರು ಪಕ್ಷದ ಜಿಲ್ಲಾ ಮಟ್ಟದ ಮುಖಂಡರಿಗೆ ಜವಾಬ್ದಾರಿಯನ್ನು ನೀಡಿದ್ದು, ಕಳ್ಳಂಬೆಳ್ಳ ಉಸ್ತುವಾರಿ ವಹಿಸಿಕೊಂಡಿರುವ ಡಿ.ಸಿ.ಗೌರಿಶಂಕರ್ ಅವರಿಗೆ ಕಳ್ಳಂಬೆಳ್ಳ ಹೋಬಳಿಯಲ್ಲ್ಲಿ ಪಕ್ಷದ ಕಾರ್ಯಕರ್ತರ ಪಡೆಯನ್ನು ಕಟ್ಟುವ ಮಹತ್ತರವಾದ ಹೊಣೆಗಾರಿಕೆಯನ್ನು ವರಿಷ್ಠರಾದ ದೇವೇಗೌಡ ಅವರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರವ್ಯಾಪ್ತಿಯಲ್ಲಿ ಉತ್ಸಾಹಿ ಯುವ ಕಾರ್ಯಕರ್ತರ ಪಡೆಯನ್ನು ಕಟ್ಟುವ ನಿಟ್ಟಿನಲ್ಲಿ ಈಗಾಗಲೇ ಜೆಡಿಎಸ್ ವರಿಷ್ಠರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ದೊಡ್ಡಾಲದಮರ ಬಳಿ ಪಕ್ಷದ ಕಚೇರಿ ಉದ್ಘಾಟನೆಗೆ ಕರೆಸಿ, ಶಕ್ತಿ ಪ್ರದರ್ಶನ ಮಾಡುವುದರೊಂದಿಗೆ, ತಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಭರವಸೆಯನ್ನು ವರಿಷ್ಠರಿಗೆ ನೀಡಿದ್ದಾರೆ. ಮುನ್ನಡೆಗೆ ರಣತಂತ್ರ: ಕಳ್ಳಂಬೆಳ್ಳ ಹೋಬಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರಿಗೆ ಮುನ್ನಡೆ ನೀಡುವ ನಿಟ್ಟಿನಲ್ಲಿ ಕಳ್ಳಂಬೆಳ್ಳ ಹೋಬಳಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಒಕ್ಕಲಿಗ ಸಮುದಾಯದೊಂದಿಗೆ ದಲಿತ ಮುಖಂಡರೊಂದಿಗೆ ಸಮನ್ವಯ ಸಾಧಿಸಿರುವ ಡಿ.ಸಿ.ಗೌರಿಶಂಕರ್ ಅವರು, ವಿವಿಧ ಪಕ್ಷಗಳ ಮುಖಂಡರನ್ನು ಜೆಡಿಎಸ್ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬೇರೆ ಪಕ್ಷಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಈ ಹಿಂದೆ ಕಳ್ಳಂಬೆಳ್ಳ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟಿ.ಬಿ.ಜಯಚಂದ್ರ ಅವರಿಗೆ ಕಳ್ಳಂಬೆಳ್ಳ ಹೋಬಳಿಯ ಮೇಲೆ ಹಿಡಿತ ಹೊಂದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದ ಗ್ರಾಮಗಳಲ್ಲಿಯೂ ಜೆಡಿಎಸ್ ಕಾರ್ಯಕರ್ತರ ಪಡೆ ಕಟ್ಟುವ ಮೂಲಕ ಕಳ್ಳಂಬೆಳ್ಳದಲ್ಲಿ ಜೆಡಿಎಸ್‍ಗೆ ಮುನ್ನಡೆ ನೀಡಲು ಟೊಂಕ ಕಟ್ಟಿದ್ದು, ಹಗಲು ರಾತ್ರಿ ಎನ್ನದೇ ಕಳ್ಳಂಬೆಳ್ಳ ಹೋಬಳಿಯಲ್ಲಿ ಅಮ್ಮಾಜಮ್ಮ ಅವರಿಗೆ ಮುನ್ನಡೆ ದೊರಕಿಸಲು ಗೌರಿಶಂಕರ್ ಅವರ ಪಡೆ ಕಾರ್ಯನಿರ್ವಹಿಸುತ್ತಿದೆ. ಕಳ್ಳಂಬೆಳ್ಳ ಹೋಬಳಿಯನ್ನು ಹೊರತುಪಡಿಸಿಯೂ ಸಹ ಗೌರಿಶಂಕರ್ ಅವರು ಸಿರಾದಲ್ಲಿ ಜೆಡಿಎಸ್ ಗೆಲುವಿಗೆ ಶ್ರಮಿಸುತ್ತಿದ್ದು, ಅಕ್ಕ ಅಮ್ಮಾಜಮ್ಮ ಅವರಿಗೆ ಮತ ನೀಡುವ ಮೂಲಕ ಸತ್ಯನಾರಾಯಣ್ ಅವರ ನೈತಿಕತೆಯನ್ನು ಗೆಲ್ಲಿಸುವಂತೆ ಕ್ಷೇತ್ರ ವ್ಯಾಪ್ತಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಪಕ್ಷದ ಸಮಾವೇಶ ಕಾರ್ಯಕ್ರಮಗಳಲ್ಲಿ ಸ್ಟಾರ್ ಪ್ರಚಾರಕರಾಗಿ, ಮತದಾರರ ಗಮನ ಸೆಳೆಯುವ ಮಾತುಗಾರಿಕೆಯನ್ನು ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಸಮರ್ಥವಾಗಿ ನಿಭಾಯಿಸುವ ಮುಖಂಡರಾಗುವ ನಿಟ್ಟಿನಲ್ಲಿ ಗೌರಿಶಂಕರ್ ಅವರ ಕಾರ್ಯ, ಪಕ್ಷ ಸಂಘಟನೆಯ ರೀತಿ ಜೆಡಿಎಸ್ ವರಿಷ್ಠರ ಗಮನ ಸೆಳೆದಿದೆ.