ಸುಳ್ಳಿನಿಂದಲೇ ಬಿಜೆಪಿ ರಾಷ್ಟ್ರದಲ್ಲಿ ಆಳ್ವಿಕೆ: ಶಾಸಕ ಶ್ರೀನಿವಾಸ್

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಪರಿಷತ್‍ನಲ್ಲಿ ಪದವೀಧರ ಶಿಕ್ಷಕರು, ನಿರುದ್ಯೋಗಿ ಪದವೀಧರರ ಸಮಸ್ಯೆಗಳಿಗೆ ಸ್ಪಂಧಿಸಲು ಹೆಚ್ಚು ಶಕ್ತಿ ತುಂಬಬೇಕು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತದಾರರಲ್ಲಿ ಮನವಿ ಮಾಡಿದರು. ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗುರುವಾರ ನಡೆದ ನಗರದ 35 ವಾರ್ಡುಗಳ ಮಹಾನಗರಪಾಲಿಕೆ ಜೆಡಿಎಸ್ ಸದಸ್ಯರು, ಮಾಜಿ ಸದಸ್ಯರು, ವಾರ್ಡುಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು,  ಕಳೆದ 6 ವರ್ಷಗಳ ಅವಧಿಯಲ್ಲಿ ವಿಧಾನ ಪರಿಷತ್‍ನಲ್ಲಿ ಚೌಡರೆಡ್ಡಿ ತೂಪಲ್ಲಿ ಅವರು ಶಿಕ್ಷಕರ ಪರವಾಗಿ, ನಿರುದ್ಯೋಗಿ ಪದವೀಧರರ ಪರವಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಇಂತಹವರನ್ನು ಮತ್ತೊಮ್ಮೆ ಪರಿಷತ್‍ಗೆ ಆಯ್ಕೆ ಮಾಡಿ ಉತ್ತಮ ಕಾರ್ಯ ನಿರ್ವಹಿಸಲು ಸಹಕರಿಸಬೇಕು ಎಂದು ಹೇಳಿದರು. ನನ್ನ ಅವಧಿಯಲ್ಲಿ 1.5 ಲಕ್ಷ ಉದ್ಯೋಗ ಕೊಡಿಸಿದ್ದೇನೆ:    

ಕಾಂಗ್ರೆಸ್ ಮತ್ತು ಜೆಡಿಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಮಂತ್ರಿಯಾಗಿದ್ದ ಅವಧಿಯಲ್ಲಿ ಸುಮಾರು 1.5 ಲಕ್ಷ ಬಿ.ಇ. ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸಿದ್ದೇನೆ ಎಂದರು. ಸುಳ್ಳಿನ ಸರ್ಕಾರ: ಬಿಜೆಪಿ ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದು ಹೇಳಿದ್ದರು, ಆದರೆ ಮೂವರಿಗೂ ಕೆಲಸ ಕೊಡಿಸಲು ಮುಖ್ಯಮಂತ್ರಿಗಳಿಂದ ಆಗಲಿಲ್ಲ, ಇನ್ನು ಆರ್‍ಎಸ್‍ಎಸ್‍ನವರು ಒಂದು ಸುಳ್ಳನ್ನು ನೂರು ಭಾರಿ ಹೇಳಿ ಸುಳ್ಳನ್ನು ಸತ್ಯವನ್ನಾಗಿಸುವ ಪ್ರಕ್ರಿಯೆ ಅವರದ್ದು, ಸುಳ್ಳಿನಿಂದಲೇ ಬಿಜೆಪಿ ರಾಷ್ಟ್ರದಲ್ಲಿ ಆಳ್ವಿಕೆ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಆದ್ದರಿಂದ ಪ್ರಬುದ್ಧ ಮತದಾರರು ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಅವರಿಗೆ ಮತ ನೀಡಿ, ಕೆಲಸ ಮಾಡಲು ಹೆಚ್ಚಿನ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ, 5 ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರವು 32 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿದ್ದು, ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಅವರ ಪರ ಅಲೆ ಎದ್ದಿದೆ. ನಮ್ಮ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು 28 ಸಾವಿರ ಮತದಾರರಿದ್ದು, ಜೆಡಿಎಸ್‍ಗೆ ಬೆಂಬಲಿಸಲಿದ್ದಾರೆ. ಈ ಭಾರಿಯೂ ಚೌಡರೆಡ್ಡಿ ತೂಪಲ್ಲಿ ಗೆಲುವು ನಿಶ್ಚಿತ, ಹಾಗೆಯೇ ಶಿರಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರ ಗೆಲುವು ಖಚಿತ ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಭಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ನಗರಾಧ್ಯಕ್ಷ ಬೆಳ್ಳಿ ಲೋಕೇಶ್ ಮಾತನಾಡಿ, ನಗರದ 35 ವಾರ್ಡುಗಳಲ್ಲಿ 7 ಬೂತ್‍ಗಳನ್ನು ಮಾಡಿದ್ದು, ಚುನಾವಣೆಗೆ ಯಾವ ಯಾವ ಬೂತ್‍ಗಳಲ್ಲಿ ಯಾರ್ಯಾರು ಇರಬೇಕು ಎಂಬುದರ ಬಗ್ಗೆ ಪಕ್ಷದ ಮುಖಂಡರು ಚರ್ಚೆ ನಡೆಸಿ ತೀರ್ಮಾನ ಮಾಡಲಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಅವರನ್ನು ಗೆಲ್ಲಿಸಲು ಎಲ್ಲಾ ವಾರ್ಡುಗಳಲ್ಲಿ ಪಕ್ಷದ ಮುಖಂಡರು ಶ್ರಮಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಹಿರಿಯ ಉಪಾಧ್ಯಕ್ಷ ಗಂಗಣ್ಣ, ಆರ್.ದೇವರಾಜು, ಗಂಗಹನುಮಯ್ಯ, ಸೇವಾದಳ ಜಿಲ್ಲಾಧ್ಯಕ್ಷ ಕೆಂಪರಾಜು, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾಹೆರಾ ಕುಲ್ಸುಮ್, ಲೀಲಾವತಿ, ರಂಗಪ್ಪ, ರಾಮೇಗೌಡ ದರ್ಶನ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಗುಬ್ಬಿ ಹಾಲಿ ಶಾಸಕ ಎಸ್.ಆರ್.ಶ್ರೀನಿವಾಸ್, ನನಗೆ ಕೋವಿಡ್-19 ಸೋಂಕಿನಿಂದ ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ, ಶಿರಾ ಕ್ಷೇತ್ರಕ್ಕೆ ತೆರಳಿ ನಮ್ಮ ಅಭ್ಯರ್ಥಿ ಅಮ್ಮಾಜಮ್ಮ ಅವರ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.