ಅಮಾನಿಕೆರೆಯಲ್ಲಿ ಅಂತರಗಂಗೆ ದೊಡ್ಡಸಮಸ್ಯೆಯಾಗಿ ಪರಿಣಮಿಸಿದೆ ಶಾಸಕ ಜ್ಯೋತಿಗಣೇಶ್ | ವಿಶ್ವ ಕನ್ನಡಿ

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಅಮಾನಿಕೆರೆಯಲ್ಲಿ ನೀರು ತುಂಬಿದ್ದು, ಒಂದೇ ತಿಂಗಳಲ್ಲಿ ಅಂತರಗಂಗೆ ಬೆಳೆದಿರುವುದು ಕಳವಳವನ್ನು ಮೂಡಿಸಿದೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದರು. ನಗರದ ಅಮಾನಿಕೆರೆಗೆ ಭೇಟಿ ನೀಡಿದ್ದ ಅವರು ವನ್ಯಜೀವಿ ತಜ್ಞರು ಹಾಗೂ ಕೆರೆ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸದಸ್ಯರು, ಟೂಡಾ ಆಯುಕ್ತ ಯೋಗಾನಂದ್ ಅವರೊಂದಿಗೆ ಅಂತರಗಂಗೆ ತೆರವುಗೊಳಿಸುವ ಬಗ್ಗೆ ಚರ್ಚಿಸಿದರು.

ಅಮಾನಿಕೆರೆ ತುಂಬಿರುವುದರಿಂದ ನಾಗರೀಕರು ಸಂತಸದಿಂದ ಇದ್ದಾರೆ, ಆದರೆ ಅಂತರಗಂಗೆ ದೊಡ್ಡಸಮಸ್ಯೆಯಾಗಿ ಪರಿಣಮಿಸಿದೆ, ಅಮಾನಿಕೆರೆಯಲ್ಲಿ ಪಕ್ಷಿಧಾಮವನ್ನು ನಿರ್ಮಾಣ ಮಾಡುವುದರ ಜೊತೆಗೆ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸಲು ಯೋಜನೆ ರೂಪಿಸಿದ್ದು, ಅಂತರಗಂಗೆ ತೆರವುಗೊಳಿಸಲು ಹೈದ್ರಾಬಾದ್‍ನ ತಜ್ಞರು ತಯಾರಿಸಿರುವ ಯಂತ್ರೋಪಕರಣಗಳು ಸಹಕಾರಿಯಾಗಲಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ ಎಂದರು.

ವನ್ಯಜೀವಿ ತಜ್ಞರು ಹಾಗೂ ಜಾಗೃತಿ ಸಮಿತಿ ಸದಸ್ಯರು ನೀಡಿರುವ ಅಭಿಪ್ರಾಯದಂತೆ ಶಾಶ್ವತವಾಗಿ ಅಂತರಗಂಗೆಯನ್ನು ನಿಯಂತ್ರಿಸುವ ದೃಷ್ಠಿಯಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಹಾಗೂ ಅಂತರಗಂಗೆಯನ್ನು ಶಾಶ್ವತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಟೂಡಾ ವತಿಯಿಂದಲೇ ಯಂತ್ರೋಪಕರಣವನ್ನು ಖರೀದಿಸಲಾಗುವುದು ಎಂದು ಹೇಳಿದರು.

ಯಂತ್ರೋಪಕರಣ ಖರೀದಿಸುವವರೆಗೆ ಟೂಡಾ ಹಾಗೂ ಮೀನುಗಾರಿಕೆ ಇಲಾಖೆವತಿಯಿಂದ ಬೋಟ್ ಮೂಲಕ ಹೈದ್ರಾಬಾದ್‍ನ ಮುಳುಗು ತಜ್ಞರಿಂದ ಅಂತರಗಂಗೆಯನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದ ಅವರು, ಅಂತರಗಂಗೆಯನ್ನು ತೆರವುಗೊಳಿಸದೇ ಹೋದರೆ ಕೆರೆ ತುಂಬ ಹರಡಿಕೊಳ್ಳಲಿದೆ ಎಂದು ತಿಳಿಸಿದರು.

ಪಾರ್ಥೇನಿಯಂ ರೀತಿ ಅಂತರಗಂಗೆಯನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಅಸಾಧ್ಯವಾಗಿದ್ದು, ಈ ಹಿಂದೆ ಇದ್ದ ಅಂತರಗಂಗೆಯಿಂದಲೇ ಈಗ ಮತ್ತೆ ಕೆರೆಯಲ್ಲಿ ಅಂತರಗಂಗೆ ಕಾಣಿಸಿಕೊಂಡಿದ್ದು, ಅಮಾನಿಕೆರೆ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ರಾಸಾಯನಿಕ ಸಿಂಪಡಿಸದೇ ಯಂತ್ರೋಪರಣಗಳ ಬಳಕೆಯಿಂದ ನಾಶ ಮಾಡಿಸಬಹುದಾಗಿದೆ ಎಂದು ಹೇಳಿದರು.