ಜಗದ ಎಲ್ಲಾ ರಾಷ್ಟ್ರೀಯರ ಹೃನ್ಮನಗಳನ್ನು ಸೂರೆಗೊಂಡ ಅತಿಶ್ರೇಷ್ಠ ಮಹಾಕಾವ್ಯವಾದ ಶ್ರೀಮದ್ ರಾಮಾಯಣವನ್ನು ವಿರಚಿಸಿದ ಬಹುಮುಖ ಪ್ರತಿಭೆಯ ದಾರ್ಶನಿಕ ಕವಿಶ್ರೇಷ್ಠರಾದ ಮಹರ್ಷಿ ವಾಲ್ಮೀಕಿಯವರು ಜಗದ ಆದಿಕವಿಯಾಗಿದ್ದಾರೆ ಎಂದು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅಭಿಪ್ರಾಯಪಟ್ಟರು.
ನಗರದ ಮಹಾತ್ಮಾಗಾಂಧೀ ರಸ್ತೆಯಲ್ಲಿ ವಿಜಯ್ ಪಾಳೇಗಾರ್ ಮಿತ್ರ ಬಳಗದ ವತಿಯಿಂದ ಜರುಗಿದ ವಾಲ್ಮೀಕಿ ಜಯಂತ್ಯೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಲ್ಲದೆ ಬೇಡನಾಗಿದ್ದ ವ್ಯಕ್ತಿ, ಕ್ರೌಂಚಪಕ್ಷಿಯ ಆರ್ತನಾದ ಕೇಳಿ, ಅದನ್ನು ಕೊಂದ ನಿಷಾದನಿಗೆ ಇತ್ತ ಶಾಪ ಸಾರಸ್ವತ ಲೋಕಕ್ಕೆ ವರವಾಯಿತು. ಮನ ಕರುಣೆಯ ಕಡಲಾಯಿತು. ಆಗ ಅನುಷ್ಟ್‍ಬ್ ಛಂದಸ್ಸಿನಲ್ಲಿ 24 ಸಾವಿರ ಶ್ಲೋಕಗಳಲ್ಲಿ ರಾಮಾಯಣ ರಚನೆಯಾಯಿತು. ಋಷಿಯ ಶೋಕವು ಶ್ಲೋಕವಾದುದು ಪವಾಡವೇ ಸರಿ. ಭೂಮಿಯನ್ನು ಹೊತ್ತಿರುವ ಆದಿಶೇಷ ಭೂಮಿಯ ಭಾರಕ್ಕೆ ತಿಣಕಲಿಲ್ಲವಂತೆ! ರಾಮಾಯಣವೆಂಬ ಮಹಾಕಾವ್ಯದ ಭಾರಕ್ಕೆ ತಿಣಿಕಿದನಂತೆ. ಜಗತ್ತಿನಲ್ಲಿ ನೂರಾರು ಭಾಷೆಗಳಲ್ಲಿ ರಾಮಾಯಣ ಮರುಸೃಷ್ಠಿಯಾಗಿದೆ. ರಾಮನೊಂದಿಗೆ ಕವಿವರ್ಯ ವಾಲ್ಮೀಕಿಯೂ ಕೂಡ ಜಗದ್ವಂದ್ಯನಾಗಿದ್ದಾನೆ ಎಂದು ಮನೋಜ್ಞವಾಗಿ ಬಣ್ಣಿಸಿದರು.
ಬಳಗದ ಅಧ್ಯಕ್ಷ ವಿಜಯ್ ಪಾಳೇಗಾರ್ ಮಾತನಾಡಿ ಶ್ರೀರಾಮನಂತಹ ಆದರ್ಶ ರಾಜನನ್ನೂ, ಸೀತೆಯಂತಹ ಮಹಾಸಾದ್ವಿಯನ್ನೂ, ಹನುಮನಂತ ಶ್ರೇಷ್ಟ ಭಂಟನನ್ನೂರೂಪಿಸಿ ಭಾರತೀಯರಿಗೆ ನೈತಿಕಪಾಠ ಹೇಳಿದ ವಾಲ್ಮೀಕಿ ನಮ್ಮ ಭಾರತದಲ್ಲಿ ಜನಿಸಿದ್ದು ನಮ್ಮ ಭಾಗ್ಯ. ಕವಿತಾಕೃಷ್ಣರು ವಾಲ್ಮೀಕಿ ರಾಮಾಯಣ ರಚಿಸಿ ಉಪಕರಿಸಿದ್ದಾರೆ. 12 ಮರುಮುದ್ರಣ ಕಂಡು ದಾಖಲೆ ಸ್ಥಾಪಿಸಿದೆ. ಇವರು ನಮ್ಮ ಜಿಲ್ಲೆಯ ಅಭಿನವ ವಾಲ್ಮೀಕಿ ಎಂದು ಬಣ್ಣಿಸಿದರಲ್ಲದೆ ಶಾಲು ಹೊದಿಸಿ ಫಲತಾಂಬೂಲಗಳೊಂದಿಗೆ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಬಳಗದ ವತಿಯಿಂದ ವಕೀಲ್ ಶಿವಕುಮಾರಸ್ವಾಮಿ, ಇಂಜಿನಿಯರ್ ತಿಪ್ಪೇಸ್ವಾಮಿ, ಸ್ನೇಕ್ ಪ್ರೇಮ್, ಸುರೇಶ್‍ನಾಯಕ ಸಂಪಾದಕ ಟಿ.ಇ. ರಘುರಾಮ್ ಇವರನ್ನು ಸನ್ಮಾನಿಸಲಾಯಿತು. ಶಿವನಂದ ರಾಥೋಡ್, ಸ್ನೇಕ್ ದಿಲೀಪ್, ಪ್ರತಾಪ್ ಮದಕರಿ, ಮ.ನ.ಬಾ ಸದಸ್ಯ, ಬಿ.ಜಿ. ಕೃಷ್ಣಪ್ಪ, ನವೀನ್, ಬಸವರಾಜು, ರಾಥೋಡ್ ಪ್ರಾರ್ಥಿಸಿದರು. ಯಶವಂತ್ .ಇ ಸ್ವಾಗತಿಸಿದರು. ನಾಗರಾಜು ವಂದಿಸಿದರು. ಜಿಲ್ಲಾ ಪುಟ್‍ಬಾಲ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮೀಕಾಂತ್ ನಿರೂಪಿಸಿದರು.