ತುಮಕೂರು: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ವಿಧಾನಪರಿಷತ್‍ನ ನಾಲ್ಕು ಸ್ಥಾನ ಮತ್ತು ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣಸವದಿ ತಿಳಿಸಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಸಂಬಂಧ ಜಿಲ್ಲೆಗೆ ಆಗಮಿಸಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ಹತ್ತು ಮತದಾರರಿಗೆ ಒಬ್ಬರಂತೆ ಕಾರ್ಯಕರ್ತರನ್ನು ನೇಮಿಸಲಾಗಿದೆ. ಅವರ ಮೂಲಕ ಮತದಾರರ ಮನೆ ಮನೆಗೆ ತೆರಳಿ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಪರಿಷತ್‍ನ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನಸಭೆಯಂತೆ, ವಿಧಾನಪರಿಷತ್ತಿನಲ್ಲಿಯೂ ಬಹುಮತ ಪಡೆಯಲಿದ್ದೇವೆ ಎಂದರು. ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರಕಾರ ಬಡವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದೀನ ದಲಿತರು, ಬಡವರ ಪರವಾಗಿ ಕೆಲಸ ಮಾಡಿದೆ.ಕಿಸಾನ್ ಸನ್ಮಾನ ಯೋಜನೆಯ ಮೂಲಕ ಕೃಷಿಕರಿಗೆ ವಾರ್ಷಿಕ ಆರು ಸಾವಿರ ರೂ ನೀಡುವ ಮೂಲಕ ಅವರ ನೆರವಿಗೆ ಬಂದಿದೆ. ಈ ಎಲ್ಲಾ ಯೋಜನೆಗಳ ಫಲಾನುಭವಿಗಳು ಪಕ್ಷದ ಕೈ ಹಿಡಿಯಲಿದ್ದಾರೆ ಎಂದು ಲಕ್ಷ್ಮಣಸವದಿ ತಿಳಿಸಿದರು. ಈ ವರ್ಷ ರಾಜ್ಯದ 24 ಜಿಲ್ಲೆಗಳಲ್ಲಿ ನೆರೆ ಬಂದು, ಬೆಳೆ, ಸಾರ್ವಜನಿಕ ಆಸ್ತಿ, ಪಾಸ್ತಿ ಹಾನಿಯಾಗಿದೆ. ಮನೆ ಕಳೆದುಕೊಂಡವರಿಗೆ 50 ಸಾವಿರದಿಂದ 5 ಲಕ್ಷದವರೆಗೆ ಪರಿಹಾರದ ಧನ ವಿತರಿಸಲಾಗುತ್ತಿದೆ. ಅಲ್ಲದೆ ರೈತರು ಬೆಳೆದ ಬೆಳೆಗಳ ಹಾನಿಯ ಅಂದಾಜು ಸಲ್ಲಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ವರದಿ ಬಂದ ತಕ್ಷಣ ಅವರಿಗೆ ಪರಿಹಾರ ಒದಗಿಸಲಿದ್ದಾರೆ. ಅಲ್ಲದೆ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಿಂದ ರಾಗಿ, ಜೋಳ, ಶೇಂಗಾ, ಸೂರ್ಯಕಾಂತಿ ಸೇರಿದಂತೆ ಹಲವು ಉತ್ಪನಗಳನ್ನು ಬೆಂಬಲ ಬೆಲೆ ಮೂಲಕ ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನವೆಂಬರ್ 1 ರಿಂದ ನೊಂದಾಯಿಸಿ, ಡಿಸೆಂಬರ್ 1 ರಿಂದ ಖರೀದಿ ಆರಂಭಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸದ ಜಿ.ಎಸ್.ಬಸವರಾಜು,ಶಾಸಕರಾದ ಜೋತಿಗಣೇಶ್, ಮಸಾಲೆ ಜಯರಾಮ್,ಮಾಜಿ ಶಾಸಕರಾದ ಸೊಗಡು ಶಿವಣ್ಣ, ಗಂಗಹನುಮಯ್ಯ, ಡಾ.ಹುಲಿನಾಯ್ಕರ್, ಮುಖಂಡರಾದ ಶಿವಪ್ರಸಾದ್, ಎಂ.ಬಿ.ನಂದೀಶ್, ಹಲವರು ಉಪಸ್ಥಿತರಿದ್ದರು.
