ಜೆಡಿಎಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ

ತುಮಕೂರು: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ಮಾತನಾಡಿ, ಕನ್ನಡ ಭಾಷೆಗೆ 8 ಜ್ಞಾನ ಪೀಠ ಪ್ರಶಸ್ತಿಗಳು ಬಂದಿದೆ. ಇಷ್ಟೊಂದು ಜ್ಞಾನಪೀಠ ಪ್ರಶಸ್ತಿಗಳು ಬೇರೆ ಯಾವ ಭಾಷೆಗಳಲ್ಲೂ ಬಂದಿಲ್ಲ ಎಂದರೆ ನಮ್ಮ ಕನ್ನಡ ಭಾಷೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದರು.

ಹರಿದು ಹಂಚಿ ಹೋಗಿದ್ದಂತಹ ಪ್ರಾಂತ್ಯಗಳನ್ನು ಹೋರಾಟದ ಮೂಲಕ ಸೇರಿಸಿದ ನಂತರ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. 1973 ರಲ್ಲಿ ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯವನ್ನು ತೆಗೆದು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಲಾಯಿತು ಎಂದರು. ನಮ್ಮ ಕನ್ನಡ ಭಾಷೆ ಅತ್ಯಂತ ಪ್ರಾಚೀನವಾದ ಭಾಷೆ. ಕನ್ನಡ ಭಾಷೆಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಹಾಗೆಯೇ ರಾಜ್ಯೋತ್ಸವವನ್ನು ಉತ್ಸುಕತೆಯಿಂದ ಆಚರಿಸುವಂತಾಗಬೇಕು ಎಂದರು.  ಪ್ರಮುಖ ಜೀವ ನದಿಗಳು ಹರಿಯುವ ನಾಡು ನಮ್ಮ ಕನ್ನಡ ನಾಡು. ಭಾಷಾವಾರು ಪ್ರಾಂತ್ಯಗಳನ್ನು ಸೇರಿಸಿ ಕನ್ನಡ ನಾಡ ಉದಯವಾಯಿತು ಎಂದು ಅವರು ಹೇಳಿದರು.  ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್ ಮಾತನಾಡಿ, 2400 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಅತ್ಯಂತ ಸಮೃದ್ಧ ಭಾಷೆ. ನಮ್ಮ ಭಾಷೆ ಶ್ರೀಮಂತವಾಗಿದ್ದು, ಇದನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು. ಕನ್ನಡಿಗರಿಗೆ ಇರುವ ಸ್ವಾಭಿಮಾನ ಬೇರೆಯವರಿಗಿಲ್ಲ. ನಮ್ಮಲ್ಲಿ ಹೊರಗಿನಿಂದ ಬಂದವರಿಗೆ ಮೃಷ್ಟಾನ್ನ ಇಡುವ ಭಾವನೆ ಇದೆ. ಇದು ಕನ್ನಡಿಗರ ಸ್ವಾಭಿಮಾನದ ಸಂಕೇತ ಎಂದರು. ಪೆÇೀಷಕರು ತಮ್ಮ ಮಕ್ಕಳನ್ನು ಕನ್ನಡ ಭಾಷೆಯಲ್ಲೇ ಶಿಕ್ಷಣ ಕೊಡಿಸಲು ಮುಂದಾಗಬೇಕು. ಆಗ ಮಾತ್ರ ನಮ್ಮ ಮಾತೃಭಾಷೆ ಮತ್ತಷ್ಟು ಬೆಳೆದು ಅನ್ನದ ಭಾಷೆಯಾಗಲು ಸಾಧ್ಯ ಎಂದರು.  ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ಹಿರಿಯ ಉಪಾಧ್ಯಕ್ಷರುಗಳಾದ ಗಂಗಣ್ಣ, ದೇವರಾಜು, ಲೀಲಾವತಿ, ಚೆಲುವರಾಜು, ರಂಗನಾಥ್,  ರವಿ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.