ಬಿಜೆಪಿಯಿಂದ ಕಾಡುಗೊಲ್ಲರ ಓಲೈಕೆ

ಶಿರಾ: ಕಾಡುಗೊಲ್ಲ ಎಂಬ ಹೆಸರನ್ನು ಜಾತಿಪಟ್ಟಿಗೆ ಸೇರಿಸಲು ನಾನು ಕಾನೂನು ಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಿ ಕಾಡುಗೊಲ್ಲ ಮತ್ತು ವೈಶ್ಯ ಜಾತಿಗಳನ್ನು ಜಾತಿಪಟ್ಟಿಗೆ ಸೇರಿಸಲು ಅಂದೇ ಶ್ರಮಿಸಿದ್ದೇನೆ. ಆದರೆ ಈಗ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಕಾಡುಗೊಲ್ಲರನ್ನು ಓಲೈಸಲು ಬಂದಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ತಿಳಿಸಿದರು.  ಅವರು ತಾಲ್ಲೂಕಿನ ಕಳ್ಳಂಬೆಳ್ಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ 1931 ರ ನಂತರ ಜಾತಿ ಸಮೀಕ್ಷೆ ಈ ರಾಜ್ಯದಲ್ಲಿ ನಡೆದಿಲ್ಲ. ಆ ಸಮೀಕ್ಷೆ ನಡೆಯಬೇಕು ಎಂದು ಸುಪ್ರಿಂ ಕೋರ್ಟ್ ಒಂದು ಕಡೆ ಹೇಳಿದೆ. ಅದನ್ನು ನಾವು ಮಾಡುವಾಗ ಕಾಡುಗೊಲ್ಲ ಎಂಬ ಹೆಸರು ಜಾತಿ ಪಟ್ಟಿಯಲ್ಲಿರಲಿಲ್ಲ. ವೈಶ್ಯ ಜಾತಿ ಪಟ್ಟಿಯಲ್ಲಿರಲಿಲ್ಲ. ಇದನ್ನು ನಾನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಿದೆ. ಆಗ ಜಾತಿ ಪಟ್ಟಿಯನ್ನು ಸೇರಿಸಲು ವಿಶೇಷ ತೀರ್ಮಾನ ಮಾಡಿ ಕಾಡುಗೊಲ್ಲರರನ್ನು ಜಾತಿಪಟ್ಟಿಗೆ ಸೇರ್ಪಡೆ ಮಾಡಿದ್ದು, ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ನಾನು ಕಾನೂನು ಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯದಲ್ಲಿ ಅನೇಕ ಜಾತಿಗಳಿವೆ. ಕೆಲ ಜಾತಿಗಳು ಜಾತಿ ಪಟ್ಟಿಯಲ್ಲಿಲ್ಲ. ಅವರೆಲ್ಲರ ಸಮೀಕ್ಷೆ ಮಾಡುವ ಉದ್ದೇಶದಿಂದ ಮಹತ್ತರ ತೀರ್ಮಾನ ಮಾಡಿದೆವು. ಸುಮಾರು 200 ಕೊಟಿ ವೆಚ್ಚದಲ್ಲಿ ಕರ್ನಾಟಕದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಎಲ್ಲಾ ರೀತಿಯ ಸಮೀಕ್ಷೆ ಮಾಡುವ ಕಾಂತರಾಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದೆವು. ಇಡೀ ರಾಜ್ಯದಲ್ಲಿ ಪ್ರತಿ ಮನೆ ಮನೆಗೂ ಹೋಗಿ ಸಮೀಕ್ಷೆ ಮಾಡಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ವರದಿ ಸಲ್ಲಿಸಿ ಒಂದು ವರ್ಷವಾಯಿತು. ಇದುವರೆಗೂ ಜಾರಿಯಾಗಿಲ್ಲ ಎಂದು ವಿಷಾಧಿಸಿದರು. ಮುಖ್ಯಮಂತ್ರಿಗಳು ಕಾಡುಗೊಲ್ಲ ಅಭಿವೃದ್ದಿ ನಿಗಮದ ಬಗ್ಗೆ ಮೊದಲು ಒಂದು ಪತ್ರ ನೀಡುತ್ತಾರೆ. ಈ ಪತ್ರ ಸಂಜೆಯೊಳಗೆ ಆದೇಶವಾಗುತ್ತದೆ. ಯಾವುದೇ ಅಭಿವೃದ್ದಿ ನಿಗಮ ಆಗಬೇಕಾದರೆ ಮೊದಲು  ವಿಧಾನಸಭೆಯಲ್ಲಿ ಚರ್ಚೆಯಾಗಿ ಒಪ್ಪಿಗೆಯಾಗಬೇಕು. ನಂತರ ಆರ್ಥಿಕ ಇಲಾಖೆ ಒಪ್ಪಿಗೆ ಪಡೆಯಬೇಕು. ಇವ್ಯಾವುದೂ ನಡೆಯದೆ ಕಾಡುಗೊಲ್ಲರ ಅಭಿವೃದ್ದಿ ನಿಗಮ ಮಾಡಿದ್ದು, ಈ ಆದೇಶಕ್ಕೆ ಯಾವುದೇ ಕಿಮ್ಮತ್ತಿಲ್ಲ. ಅದು ಒಂದು ಕಾಗದ ಮಾತ್ರ. ಅದಕ್ಕೆ ಹಣಕಾಸಿನ ಸಹಕಾರ ಸಿಗುವುದಿಲ್ಲ. ಅದನ್ನು ಬಜೆಟ್‍ನಲ್ಲಿಟ್ಟು, ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದಾಗ ಮಾತ್ರ ಅದು ಅಧಿಕೃತವಾಗುತ್ತದೆ. ಅಲ್ಲಿಯವರೆಗೂ ಒಂದು ಕಾಗದ ಮಾತ್ರ. ಅದನ್ನು ಮುಖ್ಯಮಂತ್ರಿಯಾದವರು ಅರ್ಥ ಮಾಡಿಕೊಳ್ಳಬೇಕು ಎಂದರು.