ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಾಲೂಕುಗಳ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಲ್ಪಾನಿಕ ಅರಣ್ಯ(ಡಿಮ್ಡ್ ಫಾರಸ್ಟ್) ಹೆಸರಿನಲ್ಲಿ 30-40 ವರ್ಷಗಳಿಂದ ಬಗರ್ ಹುಕ್ಕಂ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು, ಜಿಲ್ಲಾಡಳಿತ ಮದ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡುವಂತೆ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಹೆಚ್.ಆರ್.ಬೋಜರಾಜು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಹೋಬಳಿ ಸೊಂಡೇನಹಳ್ಳಿ ಸರ್ವೆ ನಂ 37 ಮತ್ತು 41 ಹಾಗೂ ಲಕ್ಷ್ಮೀನಹಳ್ಳಿ ಸರ್ವೆ ನಂಬರ್ 55 ರಲ್ಲಿ ಹಲವು ರೈತ ಕುಟುಂಬಗಳು ಕಳೆದ 35 ರಿಂದ 40 ವರ್ಷಗಳ ಕಾಲದಿಂದಲೂ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಾ ಬಂದಿದ್ದು, ಉಳುಮೆ ಮಾಡಿದ ರೈತರಲ್ಲಿ ಕೆಲವರಿಗೆ ಸಾಗುವಳಿ ಪತ್ರ ದೊರೆತಿದ್ದು,ಅನುಭವದಲ್ಲಿರುವ ರೈತರ ಹೆಸರಿಗೆ ಖಾತೆ, ಪಹಣಿ ಆಗಿದೆ. ಇನ್ನೂ ಕೆಲವರಿಗೆ ಮಂಜೂರಾತಿ ಆಗಿರುವುದು ಬಿಟ್ಟರೆ ಬೇರೆ ದಾಖಲೆಗಳಿಲ್ಲ ಎಂದರು.
ಸರಕಾರದಿಂದ ಮಂಜೂರಾಗಿರುವ ಜಾಗದಲ್ಲಿ ಈಗಾಗಲೇ ಹಲವಾರು ರೈತರು ತೆಂಗು, ಅಡಿಕೆ, ಮಾವು, ಇನ್ನಿತರ ಬಹುವಾರ್ಷಿಕ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದು,ಕೆಲವರು ರಾಗಿ ಮತ್ತಿತರ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಇತ್ತೀಚಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಡಿಮ್ಡ್ ಫಾರೆಸ್ಟ್ ಹೆಸರಿನಲ್ಲಿ ಏಕಾಎಕಿ ರೈತರ ಜಮೀನಿಗೆ ನುಗ್ಗಿ ಅವರು ಬೆಳೆಗಳನ್ನು ಕಿತ್ತು ಹಾಕಿ ತೊಂದರೆ ನೀಡುತ್ತಿದ್ದು,ಈ ಬಗ್ಗೆ ಅರಣ್ಯ ಇಲಾಖೆ,ಕಂದಾಯ ಇಲಾಖೆಯ ಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಿಲ್ಲ ದಂತಾಗಿದೆ.ಹಾಗಾಗಿ ಜಿಲ್ಲಾಡಳಿತ ಮದ್ಯಪ್ರವೇಶ ಮಾಡಿ,ರೈತರಿಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡುತ್ತೇವೆ ಎಂದರು.
ಕಾಲ್ಪಾನಿಕ ಅರಣ್ಯ ಎಂಬುದು ತಪ್ಪು ಕಲ್ಪನೆ ಎಂದು ಈಗಾಗಲೇ ಸುಪ್ರಿಂ ಕೋರ್ಟು 2016ರಲ್ಲಿ ಕೇಸ್‍ನಂ 54476ರಲ್ಲಿ ತೀರ್ಪು ನೀಡಿದೆ.ಅಲ್ಲದೆ 2019ರ ಜೂನ್ 12 ರಂದು ಕರ್ನಾಟಕ ಹೈಕೋರ್ಟು ಸಹ ಇದೇ ರೀತಿ ಅಭಿಪ್ರಾಯ ಪಟ್ಟಿದೆ.ಆದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಕಾಯ್ದೆ ಕಲಂ 04 ರ ಪ್ರಕಾರ ಬಗರ್ ಹುಕ್ಕಂ ಸಾಗುವಳಿ ಮಾಡುತ್ತಿರುವ ರೈತರನ್ನು ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿ, ರೈತರು ಬೆಳೆದ ರಾಗಿ ಇನ್ನಿತರ ಫಸಲುಗಳನ್ನು ನಾಶ ಮಾಡಿ,ತೆಂಗಿನ ಗಿಡಗಳನ್ನು ಕಿತ್ತು ಹಾಕಿ ದೌರ್ಜನ್ಯ ಎಸಗುತ್ತಿದ್ದಾರೆ.ಕೆ.ಡಿ.ಪಿ.ಸಭೆಯೊಂದರಲ್ಲಿ ಜಿಲ್ಲಾಧಿಕಾರಿಗಳೇ ಅರಣ್ಯ ಅಧಿಕಾರಿಗಳು ಬಗರ್ ಹುಕ್ಕಂ ಸಾಗುವಳಿದಾರರಿಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದರೂ ಸಹ, ಮೇಲಾಧಿಕಾರಿಗಳ ಆದೇಶಕ್ಕೂ ಬೆಲೆ ನೀಡದೆ ದುಂಡಾವರ್ತನೆ ಮಾಡುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಹೆಚ್.ಆರ್.ಬೋಜರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಇಂದ್ರಯ್ಯ, ಟಿ.ಸಿ.ರಮೇಶ್, ಶಿವಣ್ಣ ಲಕ್ಕೇನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.