ಮಹಿಳಾ ರಕ್ಷಣೆಗಾಗಿ ಅಂಚೆ ಪತ್ರ ಚಳವಳಿ

ತುಮಕೂರು: ದೇಶದಾದ್ಯಂತ ಮಹಿಳೆ ಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ಖಂಡಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಂದು ಕೆಪಿಸಿಸಿ ಮಹಿಳಾ ಘಟಕದವತಿಯಿಂದ ತುಮಕೂರಿನಲ್ಲಿ ಪತ್ರ ಚಳವಳಿ ನಡೆಸಲಾಯಿತು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅವರ ನೇತೃತ್ವದಲ್ಲಿ ತುಮಕೂರು ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಅಂಚೆ ಕಚೇರಿಯವರೆಗೆ ತೆರಳಿ, ಹತ್ರಾಸ್ ಸಂಸ್ಥೆಯ ವಿರುದ್ದ ಹರಡುತ್ತಿರುವ ತಪ್ಪು ಸಂದೇಶವನ್ನು ನಿಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ ಅಂಚೆ ಮತಪತ್ರವನ್ನು ಪ್ರಧಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಪೋಸ್ಟ್ ಮಾಡುವ ಮೂಲಕ ಚಳವಳಿ ಆರಂಭಿಸಿದರು. ಇದಕ್ಕೂ ಮೊದಲು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಪುಷ್ಪ ಅಮರನಾಥ್, ಬಿಜೆಪಿ ಸರಕಾರದಲ್ಲಿ ದೇಶದಲ್ಲಿ ಶೇ 50ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ತಾಯಿಯಾಗಿ, ಹೆಂಡತಿಯಾಗಿ,ತಂಗಿಯಾಗಿ, ಅಕ್ಕನಾಗಿ, ಮಗಳಾಗಿ ಸಮಾಜ ದಲ್ಲಿ ತನ್ನದೆ ಆದ ಸ್ಥಾನಮಾನ ಹೊಂದಿರುವ ಮಹಿಳೆರ ಮೇಲೆ ಪ್ರತಿ ಹದಿನೈದು ನಿಮಿಷಕ್ಕೊಂದು ಮಾನ ಭಂಗ ಪ್ರಕರಣಗಳು ಜರುಗುತ್ತಿವೆ.ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಘಟನೆ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು,ತನ್ನ ಮೇಲೆ ನಡೆದಿರುವ ಅತ್ಯಂತ ಅಮಾನವೀಯ ಕೃತ್ಯವನ್ನು ಸಂತ್ರಸ್ಥ ಮಹಿಳೆ ಮರಣಕ್ಕೂ ಮುನ್ನ ಹೇಳಿಕೆ ನೀಡಿದ್ದರೂ ಅದನ್ನು ಪರಿಗಣಿಸದೆ, ಅಕೆಯನ್ನು ನೋಡಲು ಕುಟುಂಬದವರಿಗೆ ಅವಕಾಶ ನೀಡದೆ ಮರಣೋತ್ತರ ಪರೀಕ್ಷೆ ನಡೆಸಿ, ರಾತ್ರೋರಾತ್ರಿ ಸುಟ್ಟು ಹಾಕಿರುವುದು ದುರಂತವೇ ಸರಿ. ಮಹಿಳೆಯರಿಗೆ ರಕ್ಷಣೆ ನೀಡಲು ಸಾಧ್ಯವಾಗದ ಮೇಲೆ ಪ್ರಧಾನಿಯಾಗಲಿ, ಅಲ್ಲಿನ ಮುಖ್ಯಮಂತ್ರಿಯಾಗಲಿ ಅಧಿಕಾರದಲ್ಲಿ ಇರಲು ಯೋಗ್ಯರಲ್ಲ ಎಂದರು.

ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿ ಮಹಿಳಾ ಸ್ವಾತಂತ್ರದ ಬಗ್ಗೆ ಅಪಾರ ಕನಸು ಕಂಡಿದ್ದರೂ, ಆದರೆ ಬಿಜೆಪಿ ಸರಕಾರದಲ್ಲಿ ಅವರ ಆಶಯಗಳಿಗೆ ತದ್ವಿರುದ್ದವಾದ ಪ್ರಕ್ರಿಯೆಗಳು ಜರುಗುತ್ತಿವೆ. ಆರ್, ಆರ್ ನಗರ ಉಪಚುನಾವಣೆಯಲ್ಲಿ ಮಹಿಳೆಯೊಬ್ಬರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವುದನ್ನು ಸಹಿಸದ ಬಿಜೆಪಿ ಕಾರ್ಯಕರ್ತರು ಆಕೆಯ ವಿರುದ್ದ ವಯುಕ್ತಿಕ ನಿಂಧನೆ ಮಾಡಿರುವುದಲ್ಲದೆ, ನೀತಿ ಸಂಹಿತೆ ಉಲ್ಲಂಘನೆ ಕೇಸು ದಾಖಲಿಸಿ, ಅನಗತ್ಯ ತೊಂದರೆ ನೀಡಲಾಗುತ್ತಿದೆ. ಬಿಜೆಪಿ ಸಂಸದೆ ಶೋಭಾ ಕರಂದಾಜ್ಲೆ ಅವರ ನೀಡಿರುವ ಹೇಳಿಕೆ ಇಡೀ ಸ್ತ್ರೀಕುಲಕ್ಕೆ ಅಪಮಾನ ಎಂದು ಡಾ.ಪುಷ್ಪ ಅಮರನಾಥ್ ನುಡಿದರು.

ಕೋವಿಡ್ ಹೆಸರಿನಲ್ಲಿ ದೇಶದ ಪ್ರಧಾನಿಗಳು ಸರಕಾರ ವಿರುದ್ದ ಇರುವ ಜನಾಕ್ರೋಶವನ್ನು ವ್ಯಕ್ತಪಡಿಸಲು ಇರುವ ಪ್ರತಿಭಟನೆ ಎಂಬ ಅಸ್ತ್ರವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ.ಆರ್.ಆರ್.ನಗರ ಉಪಚುನಾವಣೆಯಲ್ಲಿ ಬಿಜೆಪಿಯವರು ಕುತಂತ್ರ ಮಾಡಿ, ಡಿ.ಕೆ.ರವಿ ಅವರ ತಾಯಿಯವರ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಮೇಲೆ ಇಲ್ಲ,ಸಲ್ಲದ ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ.ಇದು ಆ ಪಕ್ಷಕ್ಕೆ ಶೋಭೆ ತರುವಂತಹ ನಡವಳಿಕೆಯಲ್ಲ. ಒಬ್ಬ ಮಹಿಳೆಯ ಬೆನ್ನಿಗೆ ನಿಲ್ಲಬೇಕಾದ ಮಹಿಳೆಯರೇ, ಭಾವನಾತ್ಮಕ ವಿಚಾರಗಳನ್ನು ಕೆದಕಿ,ಆಗಿರುವ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.