ದಲಿತ ಸಮುದಾಯದ ಪ್ರಾಂಶುಪಾಲರಿಗೆ ಕಿರುಕುಳ: ದಸಂಸ ಖಂಡನೆ

ತುಮಕೂರು:ದಲಿತರೆಂಬ ಕಾರಣಕ್ಕೆ ಕೆಲವರು ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಜಯರಾಮ್ ಅವರಿಗೆ ಅನಗತ್ಯ ಕಿರುಕುಳ ನೀಡಿ, ಅವರ ವರ್ಗಾವಣೆಗೆ ಇನ್ನಿಲ್ಲದೆ ತೆರೆ ಮರೆಯ ಪ್ರಯತ್ನ ನಡೆಸುತ್ತಿರುವುದು ದಲಿತ ಸಂಘರ್ಷ ಸಮಿತಿಯ ಗಮನಕ್ಕೆ ಬಂದಿದ್ದು,ಈ ಸಂಬಂಧ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಜಲ್ಲಾ ದಸಂಸ ಮುಖಂಡರಾದ ಪಿ.ಎನ್.ರಾಮಯ್ಯ ಪದವಿ ಪೂರ್ವ ಕಾಲೇಜು ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಹಲವು ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.ಇಂತಹ ಸಂದರ್ಭದಲ್ಲಿ ಪ್ರಾಂಶುಪಾಲರಾದ ಜಯರಾಮ್ ಅವರು ಹಗಲಿರುಳು ಕಾಲೇಜಿನ ಅಭಿವೃದ್ದಿಗೆ ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಕಾಲೇಜಿನ ಕೆಲ ಸಿಬ್ಬಂದಿ, ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಸೇರಿಕೊಂಡು, ಪ್ರಾಂಶುಪಾಲರ ಮೇಲೆ ಇಲ್ಲ ಸಲ್ಲದ ದೂರುಗಳನ್ನು ನೀಡಿ, ಅವರ ತೇಜೋವಧೆಗೆ ಪ್ರಯತ್ನಿಸಿರುವುದಲ್ಲದೆ, ಪ್ರಾಂಶುಪಾಲರಿಗೆ ನೀಡಬೇಕಾದ ಗೌರವವನ್ನು ನೀಡದೆ, ಅಗೌರವದಿಂದ ನಡೆದುಕೊಳ್ಳುತ್ತಾ ಅವರಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ.ಕಾಲೇಜಿನ ಮೂಲಭೂತ ಸೌಕರ್ಯಕ್ಕಾಗಿ 500 ರೂಗಳ ಶುಲ್ಕ ಪಡೆದಿರುವುದನ್ನೇ ನೆಪ ಮಾಡಿಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ.ಅಲ್ಲದೆ ಕಾಲೇಜು ಮೈಧಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿಯೂ ಕೆಲವರು ಪ್ರಾಂಶುಪಾಲರನ್ನು ಹೀನಾಯವಾಗಿ ತೆಗಳುವ ಕೆಲಸ ಮಾಡುತ್ತಿದ್ದಾರೆ. ಇದು ಒರ್ವ ಪ್ರಾಂಶುಪಾಲರನ್ನು ನಡೆಸಿಕೊಳ್ಳುವ ರೀತಿಯಲ್ಲ. ಆದ್ದರಿಂದ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇತ್ತ ಗಮನ ಹರಿಸಿ ಪ್ರಾಂಶುಪಾಲರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ದಸಂಸ ಒತ್ತಾಯಿಸುತ್ತದೆ.

ತುಮಕೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿಯೇ ಒಂದಾಗಿರುವ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತಿದ್ದು, ಅವರುಗಳಿಗೆ ಸರಿಯಾದ ಕ್ಲಾಸ್ ರೂಂ ಗಳಿಲ್ಲ. ವಾರ್ಕಿಂಗ್ ಪಾಥ್,ಸೈಕಲ್ ಸ್ಟಾಂಡ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲ. ಇದರ ಬಗ್ಗೆ ಗಮನಹರಿಸದೆ ಕೆಲ ಸಂಘ ಸಂಸ್ಥೆಗಳು, ಕಾಲೇಜಿನ ಒಳಗಿರುವ ಕೆಲ ಸಿಬ್ಬಂದಿಯೊಂದಿಗೆ ಸೇರಿ ಪ್ರಾಂಶುಪಾಲರ ವಿರುದ್ದ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ತಪ್ಪು ಭಾವನೆ ಬರುವಂತೆ ಅಪಪ್ರಚಾರ ನಡೆಸುತಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಪ್ರಾಂಶುಪಾಲ ಜಯರಾಮ್ ಅವರಿಗೆ ನ್ಯಾಯ ಒದಗಿಸಿಕೊಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ದಸಂಸ ಜಿಲ್ಲಾ ಸಂಚಾಲಕ ಪಿ.ಎನ್.ರಾಮಯ್ಯ ತಿಳಿಸಿದ್ದು, ಈ ಸಂಬಂಧ ಮನವಿಯನ್ನು ಪಿಯು ಡಿಡಿ ಅವರಿಗೆ ಸಲ್ಲಿಸಿದ್ದಾರೆ.

ಈ ವೇಳೆ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರಾದ ಎ.ನಾಗೇಶ್, ಸೋಮಣ್ಣ ,ಕೇಬಲ್ ರಘು, ಶಾಂತಣ್ಣ, ಜಯಲಕ್ಷ್ಮಮ್ಮ, ಹನುಮಂತರಾಜು, ಸಿದ್ದರಾಜು,ದಯಾನಂದ, ಅಂಜನಮೂರ್ತಿ  ಮತ್ತಿತರರು ಜೊತೆಗಿದ್ದರು.