ಕಾಂಗ್ರೆಸ್ ಮುಳುಗುವ ಹಡಗು ಬಿಜೆಪಿ ಓಡುವ ಹಡಗು : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ತುಮಕೂರು: ಕಾಂಗ್ರೆಸ್ ಪಕ್ಷ ಅಧಿಕಾರ ದೊರೆತಾಗ ಹೇಳಿದ ವಿಚಾರಗಳನ್ನು ಮರೆತು ಇಂದು ಮುಳುಗುವ ಹಡಗಾಗಿದೆ. ಆದರೆ ಭಾರತೀಯ ಜನತಾ ಪಾರ್ಟಿ ದೇಶದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಓಡುವ ಹಡಗಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಇಂದಿಲ್ಲಿ ವಿಶ್ಲೇಷಿಸಿದರು.

ಕಾಂಗ್ರೆಸ್ ಪಕ್ಷದ ಅಧಿಕಾರ ಪಡೆಯಲು ದೇಶದ ಜನರಿಗೆ ನೀಡುವ ಮಾತನ್ನು ಅಧಿಕಾರ ದೊರೆತ ನಂತರ ಮರೆಯುವುದರ ಜತೆಗೆ ಕಾರ್ಯಕರ್ತರನ್ನು ಬೆಳೆಸುವಲ್ಲೂ ಎಡವಿತು. ಹಾಗಾಗಿ ಇಂದು ಅಧಿಕಾರ ಕಳೆದುಕೊಂಡು ಮುಳುಗುವ ಹಡಗಾಗಿದೆ ಎಂದು ಟೀಕಿಸಿದರು. ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಬೆಂಗಳೂರು ಮಹಾನಗರ, ಬೆಂಗಳೂರು ಗ್ರಾಮಾಂತರ ಹಾಗೂ ದಾವಣಗೆರೆ ವಿಭಾಗದ ಮಟ್ಟದ 10 ಜಿಲ್ಲೆಗಳ ಜಿಲ್ಲಾ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ ತರಬೇತಿ ಶಿಬಿರವನ್ನು ತೆಂಗಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವ ಮುನ್ನ ದೇಶದ ಜನತೆಗೆ ಕೊಟ್ಟಿರುವ ವಿಚಾರಧಾರೆಗಳಿಗೂ ಬದ್ದರಾಗಿ, ವ್ಯಕ್ತಿಗಳ ನಿರ್ಮಾಣಕ್ಕೂ ಬದ್ಧರಾಗಿ ಕಾರ್ಯಕರ್ತರ ಜತೆಯಲ್ಲೂ ಕೆಲಸ ಮಾಡಿದ್ದರಿಂದ ದೇಶ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದೇವೆ ಎಂದರು.

ಚುನಾವಣಾ ಪೂರ್ವದಲ್ಲಿ ನೀಡಿದ ಮಾತುಗಳನ್ನು ಅನುಷ್ಠಾನಗೊಳಿಸಿದ್ದರಿಂದ ಜನರಿಗೆ ಬಿಜೆಪಿ ಬಗ್ಗೆ ವಿಶ್ವಾಸ ಜಾಸ್ತಿಯಾಯಿತು. ಹಾಗಾಗಿ 400 ಸ್ಥಾನಗಳಲ್ಲಿದ್ದ ಕಾಂಗ್ರೆಸ್ 40 ಸ್ಥಾನಕ್ಕಿಳಿಯಿತು. 2 ಸ್ಥಾನಗಳಲ್ಲಿದ್ದ ಬಿಜೆಪಿ 300ಕ್ಕಿಂತ ಹೆಚ್ಚು ಲೋಕಸಭೆಯಲ್ಲಿ ಸ್ಥಾನ ಪಡೆದು, 20ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದರು.ಕಾಂಗ್ರೆಸ್ ಪಕ್ಷ ತನ್ನ ಮಾತಿನಲ್ಲಿ, ಕಾರ್ಯಶೈಲಿಯಲ್ಲಿ ತಪ್ಪಿದ್ದರಿಂದ ಇಂದು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಮುಖಂಡ ಶ್ರೀಕಾಂತ್ ಕುಲಕರ್ಣಿ, ಪ್ರಧಾನ ಸಂಘಟನಾಕಾರ ಅರುಣ್‍ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಮಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ. ಸುರೇಶ್‍ಗೌಡ ಮತ್ತಿತರರು ಪಾಲ್ಗೊಂಡಿದ್ದರು.