ಸಿದ್ಧಗಂಗಾ ಮಠ ಜ್ಞಾನ ಅನ್ನದಾನಕ್ಕೆ ಪ್ರಸಿದ್ಧಿ | ಖಾತೆ ಹಂಚಿಕೆ ಪಟ್ಟಿ | ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ವಿಶ್ವ ಕನ್ನಡಿ

ತುಮಕೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀ ಸಿದ್ಧಗಂಗಾ ಮಠಕ್ಕೆ ಇಂದು ಭೇಟಿ ನೀಡಿ, ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಸಿದ್ಧಗಂಗಾ ಮಠ ಜ್ಞಾನ, ಅನ್ನದಾನಕ್ಕೆ ಪ್ರಸಿದ್ಧಿ ಪಡೆದುಕೊಂಡಿದೆ. ಈ ಮಠಕ್ಕೆ ಬಂದಾಗ ಪ್ರೇರಣೆ ಪಡೆದುಕೊಂಡಿದ್ದೇನೆ ಎಂದರು.

ನಾನು ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಮಠಕ್ಕೆ ಭೇಟಿ ನೀಡಿದ್ದೇನೆ. ನಾಡಿನ ಸೇವೆ ಮಾಡುವುದಕ್ಕೆ ಪರಮ ಪೂಜ್ಯ ಹಿರಿಯ ಲಿಂ. ಶ್ರೀ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದರು.

ಖಾತೆ ಹಂಚಿಕೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಬೆಂಗಳೂರಿಗೆ ಹೋಗಿ ಖಾತೆ ಹಂಚಿಕೆ ಪಟ್ಟಿ ಮಾಡುತ್ತೇನೆ ಎಂದರು.

ಈ ವೇಳೆ ಸಚಿವರಾದ ಜೆ.ಸಿ.‌ಮಾಧುಸ್ವಾಮಿ, ಬಿ.ಸಿ. ನಾಗೇಶ್, ಮುರುಗೇಶ್ ನಿರಾಣಿ, ವಿ.ಸೋಮಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ. ರಾಜೇಶ್ ಗೌಡ, ಸಂಸದ ಜಿ.ಎಸ್. ಬಸವರಾಜು, ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಸುರೇಶ್ ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಸೇರಿದಂತೆ ಇತರರಿದ್ದರು.