Vishwa Kannadi - Newspaper | News Website | Digital Channel
ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಇಂದು | VISHWA KANNADI

ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಇಂದು

ತುಮಕೂರು: ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ನಡುವೆ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಮತದಾನವು ಇಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಜಿಲ್ಲಾಡಳಿತ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಂಡಿದೆ.  ಜಿಲ್ಲೆಯಲ್ಲಿ ಹೋಬಳಿಗೆ ಒಂದರಂತೆ ಮತಗಟ್ಟೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ 5 ವಾರ್ಡ್‍ಗಳಿಗೆ ಒಂದು ಮತಗಟ್ಟೆಯಂತೆ ಒಟ್ಟು 64 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 256 ಕ್ಕೂ ಹೆಚ್ಚು  ಮತಗಟ್ಟೆ ಸಿಬ್ಬಂದಿ ಚುನಾವಣಾ ಮತದಾನ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ಪ್ರತಿ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಲಾಗಿದ್ದು, ಪ್ರತಿ ಮತಗಟ್ಟೆಗೆ ಹೆಲ್ತ್ ರೆಗ್ಯುಲೇಟರ್ಸ್‍ಗಳನ್ನು ನೇಮಿಸಲಾಗಿದೆ. ಅದರಂತೆ ಒಬ್ಬ ಎಎನ್‍ಎಂ ನೇಮಿಸಲಾಗಿದೆ. ಆರೋಗ್ಯಾಧಿಕಾರಿ ರೌಂಡ್ಸ್ ನಲ್ಲಿದ್ದು, ಕೊರೋನಾ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿಗಾ ವಹಿಸಲಿದ್ದಾರೆ.

ಮತದಾನ ಮಾಡಲು ಬರುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮತಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು.  ಸ್ಯಾನಿಟೈಸ್ ಹಾಗೂ ಮತದಾನ ಮಾಡಲು ಮತದಾರರಿಗೆ ಒಂದು ಕೈಗವಸು ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ತಿಳಿಸಿದ್ದಾರೆ. ಮತಗಟ್ಟೆಯಲ್ಲಿ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್/ವೃತ್ತಗಳನ್ನು ಹಾಕಲಾಗಿದೆ. ಮತದಾರರು ಕೊರೋನಾ ಮುಂಜಾಗ್ರತಾ ನಿಯಮಗಳನ್ನು ಪಾಲಿಸಬೇಕು.  ಜಿಲ್ಲೆಯಲ್ಲಿ ಒಟ್ಟು 29415 ಪದವೀಧರ ಮತದಾರರಿದ್ದು, ಈ ಪೈಕಿ 18,656 ಪುರುಷ ಮತದಾರರು ಹಾಗೂ 10,759 ಮಹಿಳಾ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿ ದ್ದಾರೆ. ಮತದಾನ ಮಾಡಿದ ಮತದಾರರಿಗೆ ಎಡಗೈನ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುವುದು. ಮತದಾನದ ಕಾರ್ಯ ಮುಕ್ತಾಯವಾದ ನಂತರ ತಾಲ್ಲೂಕು ಕೇಂದ್ರದಲ್ಲಿ ಡಿ-ಮಸ್ಟರಿಂಗ್ ಮಾಡಿ ಅಂದೇ ಜಿಲ್ಲಾ ಕೇಂದ್ರದಿಂದ ಮತ ಎಣಿಕೆ ನಡೆಯುವ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಕೇಂದ್ರಕ್ಕೆ ಮತ ಪೆಟ್ಟಿಗೆಗಳನ್ನು ಕಳುಹಿಸಲಾಗುವುದು.   ನ ವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ. ಕೊರೋನಾ ಸೋಂಕಿತರು/ಶಂಕಿತರಿಗೆ ಮತದಾನ ಮಾಡಲು ಮತದಾನದ ಅವಧಿಯ ಕೊನೆಯ 1 ಗಂಟೆಯ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಪಿಪಿ ಕಿಟ್‍ಗಳನ್ನು ಒದಗಿಸಲಾಗಿದೆ. ಚುನಾವಣಾ ಮತದಾನಕ್ಕೆ ಬಂದೋಬಸ್ತ್: ಚುನಾವಣಾ ಮತದಾನಕ್ಕೆ ಸೂಕ್ತ ಭದ್ರತೆ ಒದಗಿಸಲು ಜಿಲ್ಲೆಯಲ್ಲಿ 40 ಪಿ.ಎಸ್.ಐ., 13 ಎಎಸ್‍ಐ, 73 ಹೆಡ್ ಕಾನ್ಸೆಟೇಬಲ್, 129 ಪೊಲೀಸ್ ಕಾನ್ಸೆಟೇಬಲ್ ಹಾಗೂ 6 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಮತದಾನ ಮಾಡಲು ಪರ್ಯಾಯ ದಾಖಲೆಗಳು: ಮತದಾನ ಮಾಡಲು ಎಪಿಕ್ ಇಲ್ಲದಿದ್ದರೆ  ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್‍ಕಾರ್ಡ್, ಪಾಸ್‍ಪೋರ್ಟ್, ಕೇಂದ್ರ/ರಾಜ್ಯ/ಸಾರ್ವಜನಿಕ/ಸ್ಥಳೀಯ/ಖಾಸಗಿ ಕೈಗಾರಿಕೆಗಳು ತಮ್ಮ ಉದ್ಯೋಗಿಗಳಿಗೆ ನೀಡಿರುವ ಗುರುತಿನ ಚೀಟಿ, ಸಂಸದರು/ಶಾಸಕರು/ವಿಧಾನಪರಿಷತ್ ಸದಸ್ಯರ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿ, ವಿಶ್ವವಿದ್ಯಾನಿಲಯಗಳು ನೀಡಿರುವ ಪದವಿ/ಡಿಪ್ಲೋಮಾದ ಮೂಲ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರ ನೀಡಿರುವ ಅಂಗವಿಕಲತೆಯ ಮೂಲ ಪ್ರಮಾಣ ಪತ್ರವನ್ನು ಬಳಸಿ ಮತದಾನ ಮಾಡಬಹುದು. ಮತಗಟ್ಟೆ ಬಗ್ಗೆ ಮಾಹಿತಿ: ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ವೆಬ್‍ಸೈಟ್‍ನ ಹೋಂ ಪೇಜ್‍ನಲ್ಲಿ “Search Your Name in Teachers and Graduates Electoral Roll” ಎಂಬ ಶೀರ್ಷಿಕೆಯಲ್ಲಿ ಅಥವಾ ನೇರವಾಗಿ  https://ceokarnataka.kar.nic.in/SearchHome_TG.aspx ಈ ಲಿಂಕ್‍ನಲ್ಲಿ ಮತದಾರರು ತಾವು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕೆಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!